ಹೈದರಾಬಾದ್: ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದು ಭಾರತದ ಆಂತರಿಕ ವಿಷಯವಾಗಿದೆ. ಆದರೂ ಕಾಶ್ಮೀರದ ಮೂಲನಿವಾಸಿಗಳಿಗೆ ಭೌಗೋಳಿಕವಾಗಿ ಭದ್ರತೆ ನೀಡುವ ಆರ್ಟಿಕಲ್ 35ಎ ಯನ್ನು ಭಾರತ ಮರುಸ್ಥಾಪಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮೆಹಮೂದ್ ಕುರೇಶಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದು ಹಾಗೂ ರಾಜ್ಯವನ್ನು ಇಬ್ಭಾಗಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಇದೇ ಮೊದಲ ಬಾರಿಗೆ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಮೃದು ಧೋರಣೆ ತಾಳಿರುವಂತೆ ಕಂಡು ಬರುತ್ತಿದೆ. ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370 ಕಾಯ್ದೆ ರದ್ದತಿಯ ನಂತರ ಆಗಸ್ಟ್ 5, 2019 ರಿಂದ ಪಾಕಿಸ್ತಾನವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮೊಟಕುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಕಳೆದ ಕೆಲ ತಿಂಗಳುಗಳಿಂದ ಎರಡೂ ದೇಶಗಳ ಮಧ್ಯೆ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಗಳಿಂದಾಗಿ ಸಂಬಂಧ ಕೆಲ ಮಟ್ಟಿಗೆ ಸುಧಾರಿಸುತ್ತಿದೆ. 2003ರ ಕದನ ವಿರಾಮ ಒಪ್ಪಂದಕ್ಕೆ ಮತ್ತೆ ಎರಡೂ ರಾಷ್ಟ್ರಗಳು ಬದ್ಧವಾಗಿರುವುದು ಇಲ್ಲಿ ಗಮನಾರ್ಹವಾಗಿದೆ.
ಪಾಕಿಸ್ತಾನದ ಸುದ್ದಿ ವಾಹಿನಿ ಸಮಾ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಸಚಿವ ಕುರೇಶಿ ಮಾತನಾಡಿದ್ದು, ಆರ್ಟಿಕಲ್ 370 ಪಾಕಿಸ್ತಾನಕ್ಕೆ ಮುಖ್ಯವಾಗಿರಲಿಲ್ಲ. ಆದರೆ ಕಾಶ್ಮೀರದಲ್ಲಿ ಜನಮತಗಣನೆ ನಡೆಸುವ ಸಲುವಾಗಿ ಅಲ್ಲಿ ಆರ್ಟಿಕಲ್ 35ಎ ಮುಂದುವರಿಸುವುದು ಪಾಕ್ ದೃಷ್ಟಿಕೋನದಿಂದ ಬಹಳ ಮಹತ್ವ ಪಡೆದಿದೆ. ಆರ್ಟಿಕಲ್ 370 ಭಾರತದ ಆಂತರಿಕ ವಿಷಯವಾಗಿದೆ. ಆದರೂ ಈ ಕುರಿತು ಭಾರತದ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬಾಕಿ ಇದೆ ಎಂದು ಹೇಳಿದ್ದಾರೆ.
ಎರಡು ಪರಮಾಣು ಶಕ್ತಿಯುತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಮಾತುಕತೆ ನಡೆಸುವುದು ಬಿಟ್ಟು ಬೇರೆ ದಾರಿಯೇ ಇಲ್ಲ. ಯುದ್ಧ ಎಂಬುದು ಯಾವುದೇ ಕಾರಣಕ್ಕೂ ಯಾರ ಆಯ್ಕೆಯೂ ಆಗಲಾರದು. ಯುದ್ಧವು ಆತ್ಮಘಾತುಕವಾಗಲಿದೆ. ರಾಷ್ಟ್ರಗಳ ಮಧ್ಯದ ವಿವಾದ ಪರಿಹಾರಕ್ಕೆ ಮಾತುಕತೆಯೊಂದೇ ದಾರಿ. ಹೀಗಾಗಿ ಎರಡೂ ರಾಷ್ಟ್ರಗಳು ಎದುರು ಬದುರಾಗಿ ಕುಳಿತು ಮಾತನಾಡಲೇಬೇಕಿದೆ ಎಂದು ಕುರೇಶಿ ತಿಳಿಸಿದ್ದಾರೆ.