ಕಥುವಾ (ಜಮ್ಮು): ಗಡಿಯಲ್ಲಿ ಪಾಕಿಸ್ತಾನ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 10:10ರ ಸುಮಾರಿಗೆ ಹಿರಾನಗರ ಸೆಕ್ಟರ್ನ ಬೊಬಿಯಾನ್ ಗಡಿಯಲ್ಲಿ ನಿರಂತರವಾಗಿ ಪಾಕ್ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ನಿನ್ನೆ ರಾತ್ರಿಯಿಂದ ಮುಂಜಾನೆ 3 ಗಂಟೆವರೆಗೆ ಇಂಡೋ-ಪಾಕ್ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ, ಭಾರತೀಯ ಸೇನೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಜನವರಿ 13 ಹಾಗೂ 23ರಂದು ಹಿಯಾನಗರ ಸೆಕ್ಟರ್, ಪನ್ಸಾರ್ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಲು ಯತ್ನಿಸಿದ್ದು, ಪಾಕ್ ಈ ದುಷ್ಕೃತ್ಯಕ್ಕೆ ಸಹಾಯ ಮಾಡಿತ್ತು. ಆದರೆ ಭಾರತೀಯ ಸೇನೆಯು ಪಾಕ್ ಕುತಂತ್ರವನ್ನು ವಿಫಲಗೊಳಿಸಿತ್ತು.
ಗಡಿ ಕಾವಲು ಪಡೆ ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ 150 ಮೀಟರ್ ಉದ್ದದ ಸುರಂಗಗಳನ್ನು ಪತ್ತೆ ಮಾಡಿದೆ.