ಇಸ್ಲಾಮಾಬಾದ್: ಮೀನುಗಾರಿಕೆ ವೇಳೆ ಪಾಕಿಸ್ತಾನದ ಗಡಿಯೊಳಗೆ ಹೋಗಿ ಬಂಧನಕ್ಕೊಳಗಾಗಿದ್ದ 20 ಭಾರತೀಯ ಮೀನುಗಾರರನ್ನು ಇಂದು ವಾಘಾ ಗಡಿ ಮುಖಾಂತರ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.
ಕರಾಚಿಯ ಲಾಂಧಿ ಜೈಲಿನಲ್ಲಿ ಬಂಧಿಯಾಗಿದ್ದ ಮೀನುಗಾರರ ಉತ್ತಮ ನಡವಳಿಕೆ ಮತ್ತು ಮಾನವೀಯ ನೆಲೆಯ ಮೇಲೆ 20 ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಪಾಕಿಸ್ತಾನದ ಜೈಲುಗಳಲ್ಲಿ 568 ಭಾರತೀಯ ಮೀನುಗಾರರು ಇನ್ನೂ ಬಂಧನದಲ್ಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿ ಬಂಧನಕ್ಕೊಳಗಾಗಿ ಬಿಡುಗಡೆಯಾಗುತ್ತಿರುವ ಭಾರತೀಯ ಮೀನುಗಾರರ ಪ್ರಯಾಣ ವೆಚ್ಚವನ್ನು ಈಧಿ ಪೌಂಡೇಶನ್ ಭರಿಸಲು ಮುಂದಾಗಿದೆ. ಅಲ್ಲದೇ, ಉತ್ತಮ ನಡವಳಿಕೆ ಆಧಾರದ ಮೇಲೆ ಪ್ರತಿ ಮೀನುಗಾರರಿಗೆ 5 ಸಾವಿರ ರೂಪಾಯಿ ನೀಡಲು ಸಂಸ್ಥೆ ಮುಂದಾಗಿದೆ.
ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಮೀನುಗಾರರಲ್ಲಿ ಒಬ್ಬರಾದ ಭವೇಶ್ ಭಿಕಾ ಮಾತನಾಡಿ, ಮೀನುಗಾರಿಕೆ ಮಾಡುತ್ತಿದ್ದಾಗ ನಮ್ಮ ಹಡಗು ರಾತ್ರಿ ವೇಳೆ ಪಾಕಿಸ್ತಾನದ ಜಲಪ್ರದೇಶ ಪ್ರವೇಶಿಸಿದೆ. ಸಮುದ್ರದಲ್ಲಿ ಯಾವುದೇ ಗಡಿ ಇರದ ಕಾರಣ ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಮಾಧ್ಯಮಗಳ ಕಣ್ಣಿಗೆ ಬಿದ್ದ ಕೊಹ್ಲಿ ಪುತ್ರಿ: ಥೇಟ್ ಅಪ್ಪನಂತೆ ಇದ್ದಾಳೆ ಎಂದ ಅಭಿಮಾನಿಗಳು!