ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತದೆ ಎಂದು ಆರೋಪಿಸಿ ಪಾಕಿಸ್ತಾನವು ಶುಕ್ರವಾರ ಭಾರತದ ರಾಜತಾಂತ್ರಿಕರನ್ನು ವಿದೇಶಾಂಗ ಕಚೇರಿಗೆ ಕರೆಸಿ ಮಾತುಕತೆ ನಡೆಸಿದೆ.
ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಭಾರತೀಯ ರಾಜತಾಂತ್ರಿಕರಿಗೆ ಅಸ್ಸೋಂನಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಬಗ್ಗೆ ತನಿಖೆ ಮಾಡಬೇಕು. ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದೇವೆ ಎಂದು ಉಲ್ಲೇಖಿಸಿದೆ.
ಅಸ್ಸೋಂನಲ್ಲಿ ಅಕ್ರಮ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದಿದ್ದ ಹಿಂಸಾಚಾರದ ಬಗ್ಗೆ ಪಾಕ್ ತೀವ್ರ ಕಳವಳ ವ್ಯಕ್ತಪಡಿಸಿದೆ. ದರ್ರಾಂಗ್ ಜಿಲ್ಲೆಯಲ್ಲಿ ಅಕ್ರಮ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ಮೇಲೆ ಗುಂಡು ಹಾರಿಸಿ, ಮೃತದೇಹದ ಮೇಲೆ ಪೊಲೀಸರು ಹೊಡೆಯುತ್ತಿರುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದ 800 ಕ್ಕೂ ಹೆಚ್ಚು ಕುಟುಂಬಗಳನ್ನು ಪೊಲೀಸರು ಹೊರ ಹಾಕಿದ್ದಾರೆ. ಪುನರ್ವಸತಿ ನೀಡಬೇಕೆಂದು ಕುಟುಂಬಗಳು ಒತ್ತಾಯಿಸುತ್ತಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಕ್ರಮ ಒತ್ತುವರಿ ತೆರವು ವೇಳೆ ಭುಗಿಲೆದ್ದ ಹಿಂಸಾಚಾರ: ಇಬ್ಬರು ಸಾವು, 10 ಪೊಲೀಸರಿಗೆ ಗಾಯ
ದರ್ರಾಂಗ್ ಜಿಲ್ಲಾಡಳಿತವು ಇಲ್ಲಿಯವರೆಗೆ 602.4 ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಿದೆ. ಸೋಮವಾರದಿಂದ 800 ಕುಟುಂಬಗಳನ್ನು ಹೊರಹಾಕಿದ್ದು, ಸಿಪಜಾರ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ನಾಲ್ಕು ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡಿದೆ ಎನ್ನಲಾಗ್ತಿದೆ.