ತಿರುವನಂತಪುರಂ(ಕೇರಳ): ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಜೂನ್ 2011 ರಲ್ಲಿ ಅದರ ರಹಸ್ಯ ಕೋಣೆಗಳಲ್ಲಿ ಲಕ್ಷಾಂತರ ಕೋಟಿ ಮೌಲ್ಯದ ನಿಧಿಯನ್ನು ಪತ್ತೆಹಚ್ಚಿದಾಗ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿತು. ಈ ಪುರಾತನ ದೇವಾಲಯವು ಕೇರಳದ ರಾಜಧಾನಿಯಲ್ಲಿ ಪ್ರಮುಖ ಯಾತ್ರಾ ಕೇಂದ್ರವಾಗಿತ್ತು. ಇನ್ನು, ಈ ದೇವಾಲಯದ ವಾಸ್ತುಶಿಲ್ಪ ಅದ್ಭುತವಾಗಿದೆ. ಈಗ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಗೋಪುರದಲ್ಲಿ ಮೂಡಿಬರುವ ವಿಸ್ಮಯ ಭಕ್ತರನ್ನು ಬೆರಗುಗೊಳಿಸುವಂತಿದೆ.
ಸೆಪ್ಟೆಂಬರ್ 23 ರಂದು ವಿಷುವತ್ ಸಂಕ್ರಾಂತಿಯ ದಿನದಂದು (ಹಗಲು ಮತ್ತು ರಾತ್ರಿ ಒಂದೇ ಸಮಯ ಹೊಂದಿದಾಗ) ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸುಂದರವಾದ ದೃಶ್ಯವನ್ನು ನೋಡಲು ಅವಕಾಶ ದೊರೆಯುತ್ತದೆ. ಸೂರ್ಯಾಸ್ತ ಸಮಯದಲ್ಲಿ ದೇವಾಲಯದ ಗೋಪುರದ ಎಲ್ಲಾ ಐದು ಕಿಂಡಿಗಳ ಮೂಲಕ ಸೂರ್ಯ ಹಾದುಹೋಗುವ ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ಗೋಪುರದ ನಿರ್ಮಾಣದಲ್ಲಿ ವೈಜ್ಞಾನಿಕ ಲೆಕ್ಕಾಚಾರ ಮತ್ತು ಗಣಿತವೂ ಅಡಗಿದೆಯಂತೆ.
ವರ್ಷಕ್ಕೆ ಎರಡು ಬಾರಿ ಕಾಣಿಸುವ ಚಮತ್ಕಾರ.. ಈ ಚಮತ್ಕಾರವನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಸಿಗುತ್ತದೆ. ಈ ಅಪರೂಪದ ಮತ್ತು ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸಲು ಅನೇಕ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. 100 ಅಡಿ ಎತ್ತರದ ದೇವಾಲಯದ ಗೋಪುರವು ಐದು ಕಿಂಡಿಗಳನ್ನು ಹೊಂದಿದ್ದು, ಪರಸ್ಪರ ಸೂರ್ಯನ ಎದುರಾಗಿ ಹೊಂದಿಸಲಾಗಿದೆ. ವಿಷುವತ್ ಸಂಕ್ರಾಂತಿಯ ದಿನದಂದು, ಅಸ್ತಮಿಸುವ ಸೂರ್ಯ ಮೊದಲು ಗೋಪುರದ ಮೇಲ್ಭಾಗದ ಕಿಂಡಿ ಮೂಲಕ ಕಾಣಿಸಿಕೊಳ್ಳುತ್ತಾನೆ. ಅಸ್ತಮಿಸುವ ಸೂರ್ಯ ಮೂರನೇ ಕಿಟಕಿಗೆ ಪ್ರವೇಶಿಸಿದಾಗ ದೃಶ್ಯವೂ ಸಂಪೂರ್ಣವಾಗಿ ರೋಮಾಂಚಕಗೊಳ್ಳುತ್ತದೆ. ನಂತರ ಸೂರ್ಯನು ಆಕಾಶದಿಂದ ಕಣ್ಮರೆಯಾಗುವ ಮೊದಲು ನಾಲ್ಕನೇ ಮತ್ತು ಐದನೇ ಕಿಟಕಿಗಳನ್ನು ಪ್ರವೇಶಿಸುತ್ತಾನೆ. ಹೀಗೆ ಒಂದರ ಬಳಿಕ ಒಂದು ಕಿಂಡಿ ಮೂಲಕ ನಿಖರವಾಗಿ ಸೂರ್ಯ ಹಾದು ಹೋಗುವ ದೃಶ್ಯವನ್ನು ಭಕ್ತರು ನೋಡಿ ಅಚ್ಚರಿ ಪಡುತ್ತಾರೆ.
ವೈಜ್ಞಾನಿಕ ಲೆಕ್ಕಾಚಾರ.. ವೈಜ್ಞಾನಿಕವಾಗಿ ವಿವರಿಸುವುದಾದರೆ ವಿಷುವತ್ ಸಂಕ್ರಾಂತಿಯ ದಿನದಂದು ಸೂರ್ಯೋದಯ ಮತ್ತು ಸೂರ್ಯಾಸ್ತ ಭೂಮಿಯ ಸಮಭಾಜಕದ ಮೇಲೆ ನಿಖರವಾಗಿ ಬರುತ್ತದೆ. ದೇವಾಲಯದ ಗೋಪುರದ ನಿರ್ಮಾಣವು ಸೂರ್ಯನ ಈ ಸಮಭಾಜಕ ಚಲನೆಗೆ ಅನುಗುಣವಾಗಿರುತ್ತದೆ. ಆದ್ದರಿಂದ ಸೂರ್ಯವು ಅಸ್ತಮಿಸುವಾಗ ಎಲ್ಲಾ ದೇವಾಲಯದ ಗೋಪುರದ ಕಿಂಡಿಗಳ ಮೂಲಕ ಹಾದುಹೋಗುತ್ತದೆ. ನಿಯಮಿತ ದಿನಗಳಲ್ಲಿ, ಸೂರ್ಯಾಸ್ತವು ಗೋಪುರದ ದಕ್ಷಿಣ ಅಥವಾ ಉತ್ತರದಲ್ಲಿರುತ್ತದೆ.
ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಆಕರ್ಷಣೆ.. ಪದ್ಮನಾಭ ಸ್ವಾಮಿ ದೇವಾಲಯದ ನಿರ್ಮಾಣವು 16 ನೇ ಶತಮಾನದಲ್ಲಿ ಪ್ರಾರಂಭವಾಯಿತು. ಆಧುನಿಕ ತಿರುವಾಂಕೂರಿನ ವಾಸ್ತುಶಿಲ್ಪಿ ಎಂದು ವ್ಯಾಪಕವಾಗಿ ಮೆಚ್ಚುಗೆ ಪಡೆದಿರುವ ಅನಿಜಮ್ ತಿರುನಾಳ್ ಮಾರ್ತಾಂಡವರ್ಮ ಆಳ್ವಿಕೆಯಲ್ಲಿ ತನ್ನ ಅಮೂಲ್ಯವಾದ ನಿಧಿ ಮತ್ತು ವಾಸ್ತುಶಿಲ್ಪದ ಅದ್ಭುತಗಳೊಂದಿಗೆ 18 ನೇ ಶತಮಾನದಲ್ಲಿ ಪೂರ್ಣಗೊಂಡಿತು. ದೇವಾಲಯವು ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಲೇ ಇದೆ.
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಅಥವಾ ದಿವ್ಯ ದೇಸಮ್‌ಗಳಲ್ಲಿ ಒಂದಾಗಿದೆ. ದಿವ್ಯ ದೇಸಮ್‌ಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು, ಅವುಗಳನ್ನು ತಮಿಳು ಅಝ್ವರ್‌ಗಳ (ಸಂತರ) ಕೆಲಸಗಳಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ದೇವತೆ ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ, ವಿಷ್ಣು ದೇವರಾಗಿದ್ದಾರೆ.
ಓದಿ: ತಿರುವಾಂಕೂರು ರಾಜಮನೆತನಕ್ಕೆ ಒಲಿದ ಶ್ರೀ ಪದ್ಮನಾಭ ಸ್ವಾಮಿ... ಇದು ಸುಪ್ರೀಂ ಆಜ್ಞೆ!