ವಾಷಿಂಗ್ಟನ್ : ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ 6,400ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದರೆ, 231 ಸಂಸ್ಥೆಗಳು ಬಾಗಿಲು ಮುಚ್ಚಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್, ಆಫ್ಘಾನ್ ಸ್ವತಂತ್ರ ಪತ್ರಕರ್ತರ ಸಂಘ (AIJA) ಈ ಸಮೀಕ್ಷೆ ನಡೆಸಿದೆ. ದೇಶದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ನಂತರ ಆಫ್ಘನ್ ಮಾಧ್ಯಮ ಲೋಕದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದು ಅದು ಗುರುತಿಸಿದೆ.
ಆಫ್ಘಾನಿಸ್ತಾನದ ಮಾಧ್ಯಮಗಳು ತಾಲಿಬಾನ್ ಹಿಡಿತಕ್ಕೆ ಎಷ್ಟು ನಲುಗಿವೆ ಎಂದರೆ, ಪ್ರತಿ 10 ಮಾಧ್ಯಮ ಸಂಸ್ಥೆಗಳಲ್ಲಿ 4 ಕಣ್ಮರೆಯಾಗಿವೆ. ಶೇ.60ರಷ್ಟು ಉದ್ಯೋಗಿಗಳು ನಿರ್ಭೀತಿಯಿಂದ ಕೆಲಸ ಮಾಡಲಾಗದೇ ಕೆಲಸ ತೊರೆದಿದ್ದಾರೆ. ಇದರಲ್ಲಿ ಶೇ.80ರಷ್ಟು ಮಹಿಳೆಯರೇ ಇದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ದೇಶದಲ್ಲಿ ಒಟ್ಟು 543 ಮಾಧ್ಯಮಗಳು ಅಸ್ತಿತ್ವದಲ್ಲಿದ್ದವು. ತಾಲಿಬಾನಿಗಳ ಆಡಳಿತಕ್ಕೆ ಒಳಗಾದ ಮೂರೇ ತಿಂಗಳಲ್ಲಿ ಅವುಗಳ ಸಂಖ್ಯೆ 312ಕ್ಕೆ ಇಳಿದಿದೆ. ಇದು ಶೇ.43ರಷ್ಟು ಆಗಿದೆ.
ಇದಲ್ಲದೇ ಕೇವಲ 4 ತಿಂಗಳ ಹಿಂದಷ್ಟೇ ದೇಶದ ಹಲವು ಪ್ರಾಂತ್ಯಗಳಲ್ಲಿ ಖಾಸಗಿ ಒಡೆತನದ ಹಲವಾರು ವಾಹಿನಿಗಳು ಕೆಲಸ ಮಾಡುತ್ತಿದ್ದವು. ಇದೀಗ ಬೆರಳೆಣಿಕೆಯಷ್ಟು ಕೂಡ ಕಾಣ ಸಿಗುತ್ತಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಒಮಿಕ್ರಾನ್ ಲಕ್ಷಣವುಳ್ಳ ವ್ಯಕ್ತಿ ಸಾವು.. ದೇಶದಲ್ಲಿ ಹೊಸ ರೂಪಾಂತರಿಗೆ ಮೊದಲ ಬಲಿ?
ಆಪ್ಘನ್ನ ಪರ್ವಾನ್ ಉತ್ತರ ಪ್ರಾಂತ್ಯದಲ್ಲಿ 10 ಮಾಧ್ಯಮಗಳಿದ್ದವು. ಆದರೆ, ಈಗ ಕೇವಲ 3 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪಶ್ಚಿಮ ನಗರದ ಹೆರಾತ್ ಮತ್ತು ಸುತ್ತಲಿನ ಪ್ರಾಂತ್ಯದಲ್ಲಿದ್ದ 51 ಮಾಧ್ಯಮಗಳಲ್ಲಿ 18 ಮಾತ್ರ ಈಗ ಉಳಿದುಕೊಂಡಿವೆ.
ಆಗಸ್ಟ್‌ನಲ್ಲಿ ತಾಲಿಬಾನ್ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಮಹಿಳಾ ಹಕ್ಕುಗಳು, ಮಾಧ್ಯಮ ಸ್ವಾತಂತ್ರ್ಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಕ್ಷಮಾದಾನದ ಭರವಸೆ ನೀಡಿತ್ತು. ತರುವಾಯ ಸರ್ಕಾರಿ ನೌಕರರು ಮತ್ತು ಪತ್ರಕರ್ತರ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಲೇ ಇದೆ.
ತಾಲಿಬಾನಿಗಳ ವಿರುದ್ಧ ಜನರು ನಡೆಸುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆಯೂ ದೌರ್ಜನ್ಯ ನಡೆಸುತ್ತಿರುವುದು ದಾಖಲಾಗಿದೆ.