ನವದೆಹಲಿ : ದೇಶದಲ್ಲಿ ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರೂ 15 ರಿಂದ 49 ವರ್ಷ ವಯಸ್ಸಿನ ಶೇ.50ಕ್ಕೂ ಹೆಚ್ಚು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ಜಾರ್ಖಂಡ್ ಶೇ.62.6ರಷ್ಟು ಗರ್ಭಿಣಿಯರು ಸಮಸ್ಯೆ ಎದುರಿಸುವ ಮೂಲಕ ದೇಶದಲ್ಲಿಯೇ ಆ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದೆ ಎಂಬ ಆತಂಕಕಾರಿ ಅಂಶವನ್ನು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಈಗಲೂ ಗರ್ಭಿಣಿಯರು ರಕ್ತಹೀನತೆಯನ್ನು ಎದುರಿಸುತ್ತಿದ್ದಾರೆ. ಮೊದಲ ಸ್ಥಾನದಲ್ಲಿರುವ ಜಾರ್ಖಂಡ್ (ಶೇ.62.6) ಬಿಹಾರ (ಶೇ.58.3) ಮಧ್ಯಪ್ರದೇಶ (ಶೇ.54.6) ನಂತರದ ಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲ ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ಸುಧಾರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಎಲ್ಲ ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ 'ರಕ್ತಹೀನತೆ ಮುಕ್ತ ಭಾರತ' ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಆದಾಗ್ಯೂ ದೇಶದಲ್ಲಿ ರಕ್ತಹೀನತೆ ಸಮಸ್ಯೆ ಕಡಿಮೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ದೇಶದಲ್ಲಿ ಗರ್ಭಿಣಿಯರ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು 'ಸುರಕ್ಷಿತ್ ಮಾತೃತ್ವ ಆಶ್ವಾಸನ್' (SUMAN), ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK) ಯೋಜನೆ ಜಾರಿ ಮಾಡಿದೆ. ಇದರಡಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸೇರಿದಂತೆ ಉಚಿತ ಹೆರಿಗೆಗೆ ಪ್ರತಿಯೊಬ್ಬ ಗರ್ಭಿಣಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಉಚಿತ ಸಾರಿಗೆ, ಔಷಧಗಳು, ಉಚಿತ ಆಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಓದಿ: 2014ರಿಂದ ಇಲ್ಲಿಯವರೆಗೆ 4 ಕೋಟಿಗೂ ಅಧಿಕ ನಕಲಿ ಪಡಿತರ ಚೀಟಿ ರದ್ಧು: ಪ್ರಧಾನಿ ಮೋದಿ