ಹೈದರಾಬಾದ್: ಅಪರಿಚಿತ ವ್ಯಕ್ತಿಗಳು ಸುಮಾರು 50ಕ್ಕೂ ಹೆಚ್ಚು ಮಂಗಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಇಲ್ಲಿನ ಮೆಹಬೂಬಾಬಾದ್ನಲ್ಲಿ ನಡೆದಿದೆ.
ಎಲ್ಲಾ ಮಂಗಗಳ ಮೃತದೇಹಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಇಲ್ಲಿನ ಸಾನಿಗಪುರಂನ ಬೆಟ್ಟದ ಬಳಿ ಎಸೆಯಲಾಗಿದ್ದು, ಸಾವಿಗೀಡಾಗಿರುವ ಬಹುತೇಕ ಮಂಗಗಳು ಇನ್ನು ಮರಿಗಳು ಎಂದು ತಿಳಿದುಬಂದಿದೆ.
ಸ್ಥಳೀಯರು ಈ ಭಾಗದಲ್ಲಿ ಓಡಾಡುವ ವೇಳೆ ಅವರಿಗೆ ಕೊಳೆತ ವಾಸನೆ ಬಂದಿತ್ತು. ಈ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಕೊಳೆತಿರುವ ಸ್ಥಿತಿಯಲ್ಲಿ ಮಂಗಗಳ ಮೃತದೇಹಗಳು ಮತ್ತೆಯಾಗಿದ್ದು, ಐದಾರು ದಿನಗಳ ಹಿಂದೆ ಕೃತ್ಯ ನಡೆದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತಂತೆ ಅರಣ್ಯಾಧಿಕಾರಿಗಳು ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಮಂಗಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಯೇ ಅವುಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಂಗಗಳ ಹಾವಳಿಗೆ ಮೆಹಬೂಬಾಬಾದ್ ಜಿಲ್ಲೆ ಸುದ್ದಿಯಾಗುತ್ತೆ. ಬೆಳೆ ನಾಶ ಮಾಡಿರುವ ಹಿನ್ನೆಲೆ ಕೋತಿಗಳಿಗೆ ವಿಷ ಹಾಕಿ ಕೊಂದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.