ಚಮೋಲಿ (ಉತ್ತರಾಖಂಡ): ಚಮೋಲಿ ಹಿಮದುರಂತದಲ್ಲಿ ನಾಪತ್ತೆಯಾಗಿದ್ದ ಒಟ್ಟು 206 ಜನರ ಪೈಕಿ ಈವರೆಗೆ 71 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಾನವ ದೇಹದ 30 ಅವಶೇಷಗಳು ಪತ್ತೆಯಾಗಿವೆ.
ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮ ಸ್ಫೋಟಸಿ ಪ್ರವಾಹ ಉಂಟಾಗಿತ್ತು. ಅಂದಿನಿಂದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಅನೇಕ ಅಡೆತಡೆಗಳ ನಡುವೆಯೂ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇವೆ. ತಪೋವನ ಸುರಂಗದಲ್ಲಿ ಕಳೆದ ರಾತ್ರಿ 11 ಗಂಟೆಯಿಂದ ಇಂದು ಮುಂಜಾನೆ 2. 30 ರವರೆಗೆ 180 ಅಡಿ ಆಳದಷ್ಟು ಬಗೆದು, ಸುರಂಗದಿಂದ ನೀರನ್ನು ಹೊರ ಹಾಕಲಾಗಿದೆ.
ಇನ್ನೂ ಹೊಸದಾಗಿ ನಿರ್ಮಾಣವಾಗಿರುವ ಕೃತಕ ಸರೋವರದಿಂದ ಮರದ ತುಂಡುಗಳು, ಬಂಡೆಗಳನ್ನು ಎಸ್‌ಡಿಆರ್‌ಎಫ್ ಹಾಗೂ ಐಟಿಬಿಪಿ ಯೋಧರು ತೆರವುಗೊಳಿಸಿದ್ದು, ಇದೀಗ ನೀರು ಸರಾಗವಾಗಿ ಹರಿದು ಹೋಗುತ್ತಿದೆ.
ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು ರಿಷಿಗಂಗಾ ನದಿಗೆ ತಡೆಯೊಡ್ಡಿತ್ತು. ಇದರಿಂದಾಗಿ ಫುಟ್ಬಾಲ್ ಮೈದಾನದ ಮೂರರಷ್ಟು ದೊಡ್ಡದಾದ ಸರೋವರವೊಂದು ನಿರ್ಮಾಣವಾಗಿತ್ತು.