ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನವೇ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಎಲ್ಲಾ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಬಯಸಿದ್ದ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 29ರಂದು ಕರೆದಿದ್ದ ಪ್ರತಿಪಕ್ಷಗಳ ಸಂಸದರ ಸಭೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಗೈರಾಗಿದ್ದು, ಇಂಥಹ ಅನುಮಾನಗಳು ಮೂಡಲು ಕಾರಣವಾಗಿದೆ.
ಈ ವರ್ಷದ ಆಗಸ್ಟ್‌ನಲ್ಲಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಕಾಣಿಸಿಕೊಂಡಿತ್ತು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡುವಂತೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದರು.
ಆದರೆ ಪ್ರಸ್ತುತವಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಜಯ ಸಾಧಿಸಿದ್ದು, ದೇಶದೆಲ್ಲೆಡೆ ತಮ್ಮ ಪಕ್ಷವನ್ನು ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದ್ದು, ಇದೂ ಕೂಡಾ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಭಿನ್ನಮತಕ್ಕೆ ಕಾರಣವಾಗಿದೆ.
ಈ ಮೊದಲು ಅಸ್ಸೋಂನಿಂದ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಶ್ಮಿತಾ ದೇವ್, ಗೋವಾ, ಉತ್ತರ ಪ್ರದೇಶ, ದೆಹಲಿ ಮತ್ತು ಮೇಘಾಲಯದಲ್ಲಿ ಕೆಲ ನಾಯಕರು ಮತ್ತು ಮೇಘಾಲಯದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಮುಕುಲ್ ಸಂಗ್ಮಾ ಮತ್ತು ಇತರ ಶಾಸಕರು ಟಿಎಂಸಿಗೆ ಸೇರ್ಪಡೆಯಾಗಿದ್ದರು.
12 ಮಂದಿ ರಾಜ್ಯಸಭಾ ಸದಸ್ಯರ ಅಮಾನತು ಕುರಿತ ಸಭೆ ನಡೆಸಿದ್ದ 11 ವಿಪಕ್ಷಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು. ಆದರೆ ಸಭೆಗೂ ಹಾಜರಾಗದ ಟಿಎಂಸಿ, ಈ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ಉಳಿದ ವಿಪಕ್ಷಗಳಿಂದ ಅಥವಾ ಕಾಂಗ್ರೆಸ್ನಿಂದ ತೃಣಮೂಲ ಕಾಂಗ್ರೆಸ್ ಪ್ರತ್ಯೇಕವಾಗಿರಲು ಬಯಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ: ರಾಜ್ಯಸಭಾ ಸದಸ್ಯರ ಅಮಾನತು ಆದೇಶ ಸಮರ್ಥಿಸಿಕೊಂಡ ವೆಂಕಯ್ಯ ನಾಯ್ಡು: ಸದನ ಬಹಿಷ್ಕರಿಸಿ, ಪ್ರತಿಪಕ್ಷಗಳ ಪ್ರತಿಭಟನೆ