ನವದೆಹಲಿ: ಸಂಸತ್ ಅಧಿವೇಶನದಲ್ಲಿ ತಮ್ಮ ಇಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ಪ್ರತಿ ಪಕ್ಷಗಳು ಮಂಗಳವಾರ ಮತ್ತೊಮ್ಮೆ ಸಭೆ ಸೇರಿವೆ. ಬಹುತೇಕ ವಿರೋಧ ಪಕ್ಷಗಳು ಸಂಸತ್ತಿನ ಕಲಾಪದಲ್ಲಿ ಭಾಗವಹಿಸಲು ನಿರ್ಧರಿಸಿವೆ ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಆದಾಗ್ಯೂ ಪ್ರತಿಪಕ್ಷಗಳ ಸದಸ್ಯರು 'ಪ್ರಧಾನಿ ಸಂಬಂಧಿತ ಅದಾನಿ ಮಹಾಮೆಗಾ ಹಗರಣ' ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗಾಗಿ ತಮ್ಮ ಬೇಡಿಕೆ ಮುಂದುವರಿಸಲಿದ್ದಾರೆ. ಬಿಆರ್‌ಎಸ್, ಎಎಪಿ ತಮ್ಮ ಬೇಡಿಕೆಗೆ ಬದ್ಧವಾಗಿದ್ದು, ಅದಾನಿ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ಚರ್ಚೆ ನಡೆಯುವ ಮುನ್ನ ಬೇರಾವುದೇ ಚರ್ಚೆಗೆ ತಾವು ಸಿದ್ಧವಿಲ್ಲ ಎಂದು ಹೇಳಿವೆ.
ಬಹುತೇಕ ವಿರೋಧ ಪಕ್ಷಗಳು ಇಂದಿನಿಂದ ಸಂಸತ್ ಕಲಾಪಗಳಲ್ಲಿ ಭಾಗವಹಿಸಲು ನಿರ್ಧರಿಸಿವೆ ಮತ್ತು ಪ್ರಧಾನಮಂತ್ರಿ ಸಂಬಂಧಿತ ಅದಾನಿ ಮಹಾ ಮೆಗಾಸ್ಕಾಮ್ ತನಿಖೆಗಾಗಿ ಜೆಪಿಸಿ ರಚಿಸುವಂತೆ ತಮ್ಮ ಬೇಡಿಕೆ ಎತ್ತುವುದನ್ನು ಮುಂದುವರೆಸಿದೆ ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ: ಸಂಸತ್ತಿನಲ್ಲಿ ಮುಂದುವರಿದಿರುವ ಬಿಕ್ಕಟ್ಟು ಶಮನಗೊಳಿಸಲು ಆಡಳಿತಾರೂಢ ಸರ್ಕಾರದಿಂದ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸಿದರು. ಅದಾನಿ ಗ್ರೂಪ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ತನ್ನ ಬೇಡಿಕೆಯನ್ನು ಎತ್ತಲು ಪ್ರತಿಪಕ್ಷಗಳಿಗೆ ಸರ್ಕಾರ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು.
ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದಿರುವ ಜೈರಾಮ್ ರಮೇಶ್, ಇಂದು ಪ್ರತಿಪಕ್ಷಗಳು ದಿನದ ಕಾರ್ಯತಂತ್ರವನ್ನು ನಿರ್ಧರಿಸಲು ಬೆಳಗ್ಗೆ 10 ಗಂಟೆಗೆ ಸಭೆ ಸೇರಲಿವೆ. ಪ್ರಧಾನಮಂತ್ರಿ ಸಂಬಂಧಿತ ಅದಾನಿ ಮಹಾಮೆಗಾಸ್ಕಾಮ್ ತನಿಖೆಗೆ ಜೆಪಿಸಿ ರಚನೆಗೆ ಬೇಡಿಕೆ ಇಟ್ಟಿದ್ದಕ್ಕಾಗಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಸಂಸತ್ತು ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಕ್ಷಗಳು ಬಯಸುತ್ತವೆ. ಆದರೆ, ಮೋದಿ ಸರ್ಕಾರ ಹೆದರುತ್ತಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ 16 ವಿರೋಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಸಭೆ ಸೇರಿ ಅದಾನಿ ವಿಷಯದ ಕುರಿತು ಸದನದಲ್ಲಿ ತಮ್ಮ ಜಂಟಿ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದರು. ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಬಿಆರ್‌ಎಸ್, ಜೆಡಿಯು, ಎಸ್‌ಪಿ, ಸಿಪಿಎಂ, ಸಿಪಿಐ, ಜೆಎಂಎಂ, ಆರ್‌ಎಲ್‌ಡಿ, ಆರ್‌ಎಸ್‌ಪಿ, ಎಎಪಿ, ಐಯುಎಂಎಲ್, ಆರ್‌ಜೆಡಿ ಮತ್ತು ಶಿವಸೇನೆ ಪಕ್ಷಗಳು ಭಾಗವಹಿಸಿದ್ದವು.
ಅದಾನಿ ಸಮೂಹ ಕಂಪನಿಗಳಲ್ಲಿ ಸಾರ್ವಜನಿಕ ವಲಯದ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆ ಇರುವುದರಿಂದ ಅದಾನಿ ಗ್ರೂಪ್ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿರುವುದು ಸಾಮಾನ್ಯ ಜನರ ಹಣವನ್ನು ಒಳಗೊಂಡಿರುವ ಹಗರಣವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ ತಾನು ಎಲ್ಲ ಕಾನೂನುಗಳನ್ನು ಪಾಲಿಸಿರುವುದಾಗಿ ಮತ್ತು ವಿಷಯಗಳನ್ನು ಬಹಿರಂಗಪಡಿಸುವಿಕೆಯ ಅಗತ್ಯತೆಗಳನ್ನು ಪೂರೈಸಿರುವುದಾಗಿ ಅದಾನಿ ಸ್ಪಷ್ಟೀಕರಣ ನೀಡಿದೆ. ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪ್ ಮಾಣಿಕ್ಕಂ ಠಾಗೋರ್ ಸದನವನ್ನು ಮುಂದೂಡುವಂತೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ಅದಾನಿ ಸಮೂಹ ವಿರುದ್ಧ ತನಿಖೆಗೆ ಕಾಂಗ್ರೆಸ್ ನಾಯಕರ ಒತ್ತಾಯ