ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಅಂತಿಮ ವಾರಕ್ಕೆ ಕಾಲಿಟ್ಟಿದೆ. ಅದರೆ ಆರಂಭದಿಂದ ಇಂದಿನವರೆಗೂ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಸಂಸತ್ತಿನ ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗುತ್ತಿದೆ. ಇಂದೂ ಕೂಡ ಆರಂಭಗೊಂಡಿದ್ದ ರಾಜ್ಯಸಭೆ ಹಾಗೂ ಲೋಕಸಭೆ ಕಲಾಪಗಳು ಮಧ್ಯಾಹ್ನ 2 ಗಂಟೆಗೆ ಮುಂದೂಡಲ್ಟಿಟ್ಟಿದೆ.
ಇದರ ಬೆನ್ನಲ್ಲೇ 15 ಪ್ರತಿಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದರು. ಸಭೆಯಲ್ಲಿ ಪೆಗಾಸಸ್ ವಿವಾದ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Monsoon Session : ಮೂರನೇ ವಾರದಲ್ಲಿ ಏರಿಕೆಯಾದ ಮೇಲ್ಮನೆಯ ಉತ್ಪಾದಕತೆ ಪ್ರಮಾಣ
ಕಾಂಗ್ರೆಸ್ ಜೊತೆಗೆ ಡಿಎಂಕೆ, ಟಿಎಂಸಿ, ಎನ್ ಸಿಪಿ, ಶಿವಸೇನೆ, ಎಸ್ಪಿ, ಸಿಪಿಎಂ, ಆರ್ಜೆಡಿ, ಎಎಪಿ, ಸಿಪಿಐ, ಎನ್ಸಿ, ಐಯುಎಂಎಲ್, ಎಲ್ಜೆಡಿ, ಆರ್ಎಸ್ಪಿ ಮತ್ತು ಕೆಸಿ(ಎಂ) ನಾಯಕರು ಹಾಜರಿದ್ದರು. ಪ್ರತಿಪಕ್ಷಗಳು ಒಗ್ಗೂಡಿ ಪೆಗಾಸಸ್ ಸ್ನೂಪಿಂಗ್ ಸಮಸ್ಯೆ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಯಸುತ್ತವೆ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
ಇಂದು ಲೋಕಸಭೆಯು ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ -2021 ಕುರಿತು ಮಾತನಾಡುವಾಗ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗಿಳಿದು 'ಪೆಗಾಸಸ್' ಬಗೆಗಿನ ಮಾಧ್ಯಮ ವರದಿಯನ್ನು ಒತ್ತಿ ಹೇಳಿದರು.