ಚೆನ್ನೈ: ಕಳೆದ ಒಂದು ವರ್ಷದಿಂದ ಭವಾನಿ ಎಂಬುವರು ಆನ್‌ಲೈನ್ ರಮ್ಮಿ ಆಟಕ್ಕೆ ವ್ಯಸನಿಯಾಗಿದ್ದರು. ಹೀಗಾಗಿ ಆಕೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ವಿಚಾರವಾಗಿ ನೊಂದಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭವಾನಿ (29) ಅವರು ಚೆನ್ನೈನ ಮನಾಲಿ ನ್ಯೂ ಟೌನ್‌ನ ಎಂಎಂಡಿಎ ಕಾಲೋನಿಯವರು. ಅಂಬತ್ತೂರು ಪ್ರದೇಶದ ಭಾಗ್ಯರಾಜ್ (32) ಎಂಬಾತನನ್ನು ಪ್ರೀತಿಸಿ 2016ರಲ್ಲಿ ವಿವಾಹವಾಗಿದ್ದಳು. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಪತಿ ಭಾಗ್ಯರಾಜ್ ಖಾಸಗಿ ಕಂಪನಿಯಲ್ಲಿ ಮತ್ತು ಭವಾನಿ ಕಂದಂಚವಾಡಿಯ ಖಾಸಗಿ ಹೆಲ್ತ್‌ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ಒಂದು ವರ್ಷದಿಂದ ಭವಾನಿ ಆನ್‌ಲೈನ್ ರಮ್ಮಿಗೆ ವ್ಯಸನಿಯಾಗಿದ್ದಳು ಎನ್ನಲಾಗಿದೆ. ಹೀಗಾಗಿ ಆಕೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ವಿಚಾರವಾಗಿ ಭವಾನಿ ಪತಿ ಹಾಗೂ ಭವಾನಿ ಮನೆಯವರು ಭವಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಭವಾನಿ ಆನ್‌ಲೈನ್ ರಮ್ಮಿ ಆಡುವುದನ್ನು ಮುಂದುವರೆಸಿದ್ದಳು.
ಭವಾನಿ ತನ್ನ ಬಳಿ ಇದ್ದ ಎಲ್ಲಾ ಚಿನ್ನಾಭರಣಗಳನ್ನು ಮಾರಿ ಅದರಿಂದ ಬಂದ ಹಣದಲ್ಲಿ ಆನ್‌ಲೈನ್‌ನಲ್ಲಿ ರಮ್ಮಿ ಆಡಿದ್ದಾಳೆ. ಅದರಲ್ಲೂ ಸಹ ಹಣ ಕಳೆದುಕೊಂಡ ಭವಾನಿ ಖಿನ್ನತೆಗೆ ಒಳಗಾಗಿದ್ದಳು. ಇದಾದ ನಂತರ ಆನ್‌ಲೈನ್ ರಮ್ಮಿ ಗೇಮ್‌ನಲ್ಲಿ ಹಣ ಕಳೆದುಕೊಂಡಿರುವುದಾಗಿ ನಾಲ್ಕು ದಿನಗಳ ಹಿಂದೆ ತನ್ನ ಸಹೋದರಿಯೊಬ್ಬರಿಗೆ ಹೇಳಿದ್ದಳಂತೆ.
ಭಾನುವಾರ ರಾತ್ರಿ ಮನೆಗೆ ಸ್ನಾನಕ್ಕೆಂದು ತೆರಳಿದ್ದ ಆಕೆ ಬಚ್ಚಲು ಮನೆಯಿಂದ ಹೊರ ಬಂದಿಲ್ಲ. ಅವಳ ಗಂಡನಿಗೆ ಅನುಮಾನ ಬಂದು ಬಾಗಿಲು ತೆರೆದ ಭವಾನಿ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದರಿಂದ ಆಘಾತಕ್ಕೊಳಗಾದ ಭವಾನಿ ಪತಿ ಭವಾನಿಯನ್ನು ಚೆನ್ನೈ ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಭವಾನಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಭವಾನಿ ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸರ್ಕಾರ ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಕಡೆಯಿಂದ ಆನ್‌ಲೈನ್ ರಮ್ಮಿಯ ನಿರಂತರ ಜಾಗೃತಿಯ ಹೊರತಾಗಿಯೂ, ಇಂತಹ ಪ್ರಕರಣಗಳು ನಡೆಯುತ್ತಿವೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ