ನವದೆಹಲಿ: ಸುಪ್ರೀಂ ಕೋರ್ಟ್ ಗುರುವಾರ ತನ್ನ ಆರ್‌ಟಿಐ ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ಕಾಯ್ದೆ) ಅಡಿಯಲ್ಲಿ ಅರ್ಜಿಗಳನ್ನು ಇದರ ಮೂಲಕ ಸಲ್ಲಿಸಬಹುದು. ಇದೇ ಮಂಗಳವಾರ ಸುಪ್ರೀಂ ಕೋರ್ಟ್ ಆನ್‌ಲೈನ್ ಪೋರ್ಟಲ್‌ನ ಟೆಸ್ಟ್ ವರ್ಷನ್ ಅನ್ನು ಸಕ್ರಿಯಗೊಳಿಸಿದೆ.
ಆನ್‌ಲೈನ್ ಆರ್‌ಟಿಐ ಪೋರ್ಟಲ್ ಶೀಘ್ರದಲ್ಲೇ ಸಕ್ರಿಯವಾಗಲಿದೆ ಎಂದು ಇಂದು ಬೆಳಗ್ಗೆ 10:30 ಕ್ಕೆ ವಿಚಾರಣೆ ಪ್ರಾರಂಭಿಸುವ ಮೊದಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಘೋಷಿಸಿದರು. ಸುಪ್ರೀಂ ಕೋರ್ಟ್‌ನ ಆರ್‌ಟಿಐ ಪೋರ್ಟಲ್ ಸಿದ್ಧವಾಗಿದ್ದು, 15 ನಿಮಿಷಗಳಲ್ಲಿ ಕಾರ್ಯನಿರ್ವಹಿಸಲಿದೆ. ಗಂಭೀರ ಸಮಸ್ಯೆಗಳಿದ್ದಲ್ಲಿ ನಾವು ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಆರ್‌ಟಿಐ ಅರ್ಜಿ, ಮೊದಲ ಮೇಲ್ಮನವಿ ಸಲ್ಲಿಸಲು ಮತ್ತು ಶುಲ್ಕ, ನಕಲು ಶುಲ್ಕಗಳ ಪಾವತಿ ಇತ್ಯಾದಿಗಳಿಗೆ ಭಾರತೀಯ ನಾಗರಿಕರು ಮಾತ್ರ ಈ ಪೋರ್ಟಲ್ ಅನ್ನು ಬಳಸಬಹುದು. ಅರ್ಜಿದಾರರು ನಿಗದಿತ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಮಾಸ್ಟರ್/ವೀಸಾ ಅಥವಾ ಯುಪಿಐನ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಪ್ರತಿ ಆರ್‌ಟಿಐ ಅರ್ಜಿ ಶುಲ್ಕ 10 ರೂಪಾಯಿ ಆಗಿದೆ.
ಈವರೆಗೆ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಆರ್‌ಟಿಐ ಅರ್ಜಿಗಳನ್ನು ಭೌತಿಕವಾಗಿ ಸಲ್ಲಿಸಬೇಕಾಗಿತ್ತು. ಆನ್‌ಲೈನ್ ಆರ್‌ಟಿಐ ಪೋರ್ಟಲ್ ಆರಂಭಿಸುವಂತೆ ಹಲವಾರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪಿಐಎಲ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಕಳೆದ ವಾರ ಇಂಥ ಒಂದು ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ಶೀಘ್ರದಲ್ಲೇ ಪೋರ್ಟಲ್ ಆರಂಭಿಸಲಾಗುವುದು ಎಂದು ಹೇಳಿತ್ತು.
ಇದನ್ನೂ ಓದಿ: ಮಾಹಿತಿ ಕೇಳಿದ ವಿಶೇಷಚೇತನನಿಗೆ ಒದ್ದ ಸರಪಂಚ್.. ದರ್ಪ ತೋರಿ ಸ್ಥಾನ ಕಳೆದುಕೊಂಡ ದುರಹಂಕಾರಿ