ವಾರಣಾಸಿ(ಯು.ಪಿ): ಇಂದಿಗೆ ಭವ್ಯವಾದ ಕಾಶಿ ವಿಶ್ವನಾಥ ಧಾಮವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿ ಒಂದು ವರ್ಷ ತುಂಬಿದೆ. ಕಳೆದೊಂದು ವರ್ಷದಲ್ಲಿ ವಿಶ್ವನಾಥನ ದರ್ಶನಕ್ಕೆ ವಿಶ್ವದೆಲ್ಲೆಡೆಯಿಂದ ಆಗಮಿಸಿದ ಶಿವಭಕ್ತರು ಉದಾರವಾಗಿ ನಗದು, ಚಿನ್ನ, ಬೆಳ್ಳಿ ಮತ್ತಿತರ ಲೋಹಗಳನ್ನು ಅರ್ಪಿಸಿದ್ದಾರೆ.
ಶ್ರೀಕಾಶಿ ಧಾಮವು ತನ್ನ ಮೊದಲ ವರ್ಷದಲ್ಲಿ ಕೊಡುಗೆಗಳ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಕೇವಲ ಒಂದು ವರ್ಷದಲ್ಲಿ ಬಾಬಾ ಧಾಮಕ್ಕೆ 100 ಕೋಟಿಗೂ ಹೆಚ್ಚು ಮೌಲ್ಯದ 60 ಕೆಜಿಗಿಂತಲೂ ಹೆಚ್ಚು ಚಿನ್ನ ಮತ್ತು ಬೃಹತ್ ಪ್ರಮಾಣದಲ್ಲಿ ಬೆಳ್ಳಿ ಮತ್ತು ಇತರ ಅನೇಕ ಲೋಹಗಳು ಭಕ್ತರಿಂದ ಕಾಣಿಕೆಯ ರೂಪದಲ್ಲಿ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅಂದಾಜಿನ ಪ್ರಕಾರ, ಕಾಣಿಕೆಗಳ ಒಟ್ಟು ಮೌಲ್ಯ 100 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.
ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್ ವರ್ಮಾ ಮಾತನಾಡಿ, ಭಕ್ತರಿಂದ 100 ಕೋಟಿಗೂ ಹೆಚ್ಚು ಮೌಲ್ಯದ ಕಾಣಿಕೆ ಬಂದಿದೆ. ಇದರಲ್ಲಿ ಸುಮಾರು 50 ಕೋಟಿ ನಗದು ದೇಣಿಗೆಯಾಗಿದೆ. ಶೇಕಡಾ 40ರಷ್ಟು ಹಣವನ್ನು ಆನ್‌ಲೈನ್ ಸೌಲಭ್ಯಗಳ ಮೂಲಕ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ, ಸುಮಾರು 50 ಕೋಟಿ ಬೆಲೆಬಾಳುವ ಲೋಹವು (60 ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಮತ್ತು 1500 ಕೆಜಿ ತಾಮ್ರ) ಬಂದಿದ್ದು, ಭಕ್ತರು ನೀಡಿದ ಚಿನ್ನ ಮತ್ತು ತಾಮ್ರವನ್ನು ಬಳಸಿ ಗರ್ಭಗುಡಿಯ ಹೊರ ಮತ್ತು ಒಳ ಗೋಡೆಗಳನ್ನು ಚಿನ್ನದಿಂದಲೇ ಅಲಂಕರಿಸಲಾಗಿದೆ. ಅಲ್ಲದೇ ಈ ಮೊತ್ತವು ಕಳೆದ ವರ್ಷಕ್ಕಿಂತ ಸುಮಾರು 500 ಪ್ರತಿಶತ ಹೆಚ್ಚು ಎಂದು ತಿಳಿದು ಬಂದಿದೆ. ಶ್ರೀಕಾಶಿ ವಿಶ್ವನಾಥ ಧಾಮದಲ್ಲಿ ಡಿಸೆಂಬರ್ 1-12-2022 ಸೆ 12-12-2022 ವರೆಗಿನ ಒಟ್ಟು ಭಕ್ತಾದಿಗಳ ಸಂಖ್ಯೆ 7,35,82,042 ಆಗಿದೆ.
5 ವರ್ಷದಲ್ಲಿ ನಿರ್ಮಾಣ ವೆಚ್ಚ: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳುವ ಪ್ರಕಾರ, ಶ್ರೀಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಹಾಗೂ ಪರಿಹಾರಕ್ಕೆ ಸುಮಾರು 900 ಕೋಟಿ ರೂ. ತಗುಲಿದೆ. ಮುಂದಿನ ದಿನಗಳಲ್ಲಿ ಧಾಮದಲ್ಲಿ ಸೌಲಭ್ಯಗಳ ವಿಸ್ತರಣೆಯಾಗುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ. ಇದರಿಂದ ಶಿವಭಕ್ತರಿಂದ ಕಾಣಿಕೆಯೂ ಹೆಚ್ಚಾಗಲಿದೆ. ಕಾಣಿಕೆಗಳಲ್ಲದೆ ಕಾರಿಡಾರ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳಿಂದ ಹೆಚ್ಚುವರಿ ಆದಾಯ ಬರಲಿದೆ ಎಂದರು. ಇನ್ನು 4ರಿಂದ 5 ವರ್ಷಗಳಲ್ಲಿ ಭಕ್ತರ ಕಾಣಿಕೆ ಹಾಗೂ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡಗಳಿಂದ ಬರುವ ಆದಾಯದಿಂದ ಕಾರಿಡಾರ್‌ಗೆ ತಗಲುವ ವೆಚ್ಚ ಭರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಧಾಮದ ಉದ್ಘಾಟನೆಯ ನಂತರ ದೇವಸ್ಥಾನದ ಟ್ರಸ್ಟ್ ವತಿಯಿಂದ ಭಕ್ತರ ಸೌಲಭ್ಯಗಳನ್ನು ನಿರಂತರವಾಗಿ ಸುಧಾರಿಸಲು ಪ್ರಯತ್ನಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ನೆರಳು, ಚಾಪೆ ಮತ್ತಿತರ ಮೂಲ ಸೌಕರ್ಯಗಳ ಜೊತೆಗೆ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗಿದೆ. ಸುಲಭ ದರ್ಶನ ವ್ಯವಸ್ಥೆಯಲ್ಲಿ 50 ಸಿಬ್ಬಂದಿ, ಸ್ವಚ್ಛತಾ ವ್ಯವಸ್ಥೆಯಲ್ಲಿ 200 ಸಿಬ್ಬಂದಿ ಹಾಗೂ ಪ್ರವಾಸಿಗರಿಗೆ ಉತ್ತಮ ಸುರಕ್ಷತೆ ಮತ್ತು ಅನುಕೂಲ ಕಲ್ಪಿಸಲು 100 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೇ ಲಾಕರ್, ಹೆಲ್ಪ್ ಡೆಸ್ಕ್ ಗಳನ್ನು ಅಳವಡಿಸಲಾಗಿದೆ. ದೇವಸ್ಥಾನಕ್ಕೆ ಬರುವ ವೃದ್ಧರು ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಗಾಲಿಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
ಧಾಮದಿಂದ ವಾರಣಾಸಿಯಲ್ಲಿ ಹೆಚ್ಚಿದ ಪ್ರವಾಸಿಗರು: ಕಾಶಿ ವಿಶ್ವನಾಥ ಧಾಮವು ಹೊಸ ರೀತಿಯಲ್ಲಿ ಭವ್ಯವಾಗಿ ಕಾಣಿಸಿಕೊಂಡಿದ್ದು ಪ್ರವಾಸಿಗರು ಮತ್ತು ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಸಾರಿಗೆ, ಹೋಟೆಲ್‌ಗಳು, ಅತಿಥಿಗೃಹಗಳು,ಕಾರ್ಮಿಕರು, ಜವಳಿ ಉದ್ಯಮ, ಕರಕುಶಲ ಮತ್ತು ಇತರ ವ್ಯವಹಾರಗಳಿಂದ ಆರ್ಥಿಕತೆಯು ವೇಗ ಪಡೆಯುತ್ತಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದನ್ನು ಖಚಿತಪಡಿಸಿದ್ದು, ಈ ಹಿಂದೆ ಕಾಶಿಗೆ ವರ್ಷಕ್ಕೆ 1 ಕೋಟಿ ಪ್ರವಾಸಿಗರು ಬರುತ್ತಿದ್ದರು, ಆದರೆ ಈಗ ಒಂದು ತಿಂಗಳಲ್ಲಿ ಬನಾರಸ್‌ಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ದಾದಾ ಭಗವಾನ್, ಸೀಮಂಧರ್ ಸ್ವಾಮಿಗೆ ನಮಿಸಿ ಸಿಎಂ ಸ್ಥಾನ ಅಲಂಕರಿಸಿದ ಭೂಪೇಂದ್ರ ಪಟೇಲ್