ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರ ಅಧಿಕಾರಕ್ಕೆ ಬಂದು ಜಾರಿಗೊಳಿಸಿದ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆಗೆ ಇದೀಗ ಒಂದು ವರ್ಷವಾಗುತ್ತಿದೆ. ವರ್ಷದಲ್ಲಿ ಶೇ 90ರಷ್ಟು ಕುಟುಂಬಗಳು ರಾಜ್ಯದಲ್ಲಿ ಶೂನ್ಯ ಬಿಲ್ ಪ್ರಯೋಜನ ಪಡೆದಿವೆ. ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉಚಿತ ವಿದ್ಯುತ್ ಖಾತರಿ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿ, " ಯೋಜನೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ದೊಡ್ಡ ಲಾಭವಾಗಿದೆ. ಸರ್ಕಾರವು ಕಳೆದ ವರ್ಷ ಜುಲೈ 1ರಂದು ಜನರಿಗೆ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಜಾರಿಗೆ ತಂದಿದೆ. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಶೇ.90ರಷ್ಟು ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಕಳೆದ ಜುಲೈನಿಂದ ವಿದ್ಯುತ್ ಬಿಲ್ ಶೂನ್ಯವಾಗಿದೆ" ಎಂದರು.
ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ರೈತರು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಸರ್ಕಾರವು ಪಂಜಾಬ್ ರಾಜ್ಯ ವಿದ್ಯುತ್ ನಿಗಮಕ್ಕೆ 20,200 ಕೋಟಿ ರೂ. ಗಳ ಸಬ್ಸಿಡಿ ಸಹ ಪಾವತಿಸಿದೆ. ಹಿಂದಿನ ಸರ್ಕಾರಗಳಂತೆ ಸಾಲ ಪಡೆದು ಈ ಕ್ರಮ ಕೈಗೊಂಡಿಲ್ಲ. ಖಜಾನೆ ಲೂಟಿ, ಭ್ರಷ್ಟಾಚಾರ ತಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಿಸಿದರು.
ರಾಜ್ಯ ಸರ್ಕಾರದ ಸಂಘಟಿತ ಪ್ರಯತ್ನದಿಂದ 2015ರ ನಂತರ ಪಚ್ವಾರ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆ ಪುನರಾರಂಭವಾಗಿದೆ. ಹಿಂದಿನ ಸರ್ಕಾರಗಳು ಖಾಸಗಿ ಥರ್ಮಲ್ ಪ್ಲಾಂಟ್ಗಳಿಂದ ಅಕ್ರಮವಾಗಿ ಹಣ ಕೀಳಲು ಗಣಿಗಳಿಂದ ಸರಬರಾಜು ನಿಲ್ಲಿಸಿದ್ದವು ಎಂದು ಭಗವಂತ ಮಾನ್ ಹೇಳಿದರು.
ಪಂಜಾಬ್‌ನಲ್ಲಿ ಕಲ್ಲಿದ್ದಲು ನಿಕ್ಷೇಪ: ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಂಜಾಬ್‌ನಲ್ಲಿ 43 ದಿನಗಳ ಕಲ್ಲಿದ್ದಲು ನಿಕ್ಷೇಪವಿರುವುದು ಗೊತ್ತಾಗಿದೆ. ಆದರೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜ್ಯದಲ್ಲಿ ಅವುಗಳನ್ನು ಮುಚ್ಚಿ ಹಾಕುವ ಭೀತಿ ಇತ್ತು. ದೇಶಾದ್ಯಂತ ಸರ್ಕಾರಗಳು ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರೂ ಪಂಜಾಬ್ ಸರ್ಕಾರವು ಖಾಸಗಿ ಥರ್ಮಲ್ ಪ್ಲಾಂಟ್‌ಗಳನ್ನು ಖರೀದಿಸಲು ನಿರ್ಧರಿಸುವ ಮೂಲಕ ರಿವರ್ಸ್ ಟ್ರೆಂಡ್ ಪ್ರಾರಂಭಿಸಿದೆ ಎಂದು ಸಿಎಂ ತಿಳಿಸಿದರು.
ಭತ್ತದ ಹಂಗಾಮಿನಲ್ಲೂ ಉದ್ಯಮಕ್ಕೆ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಪಂಜಾಬ್ ಅನ್ನು ವಿದ್ಯುತ್ ಹೆಚ್ಚುವರಿ ರಾಜ್ಯವನ್ನಾಗಿ ಮಾಡಲು ಸರ್ಕಾರವು ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಈಗ ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ, ಸೌರ ಮತ್ತು ಜಲವಿದ್ಯುತ್ ಉತ್ತೇಜಿಸಲು ಗಮನ ಹರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನೀರಿನ ಸೋರಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ರಾವಿ ನದಿಯ ಪಠಾಣ್‌ಕೋಟ್‌ನಲ್ಲಿ 206 MW ಸಾಮರ್ಥ್ಯದ ಜಲವಿದ್ಯುತ್ ಯೋಜನೆ ಸ್ಥಾಪಿಸುತ್ತಿದೆ. ಈ ನೀರನ್ನು ವಿದ್ಯುತ್ ಉತ್ಪಾದನೆಗೆ ಹಾಗೂ ರಾಜ್ಯದ ಹೊಲಗಳಿಗೆ ನೀರುಣಿಸಲು ಬಳಸಲಾಗುವುದು. ಸರ್ಕಾರದ ಪ್ರಯತ್ನದಿಂದ ಪ್ರಥಮ ಬಾರಿಗೆ ಗ್ರಾಮಗಳಿಗೆ ಕಾಲುವೆ ನೀರು ತಂದಿದ್ದು, ಕೊಳವೆಬಾವಿಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ ಮತ್ತು ವಿದ್ಯುತ್ ಮತ್ತು ಅಂತರ್ಜಲದಲ್ಲಿ ಗಣನೀಯ ಉಳಿತಾಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಪಂಜಾಬ್ ಅನ್ನು 'ರಂಗಲಾ ಪಂಜಾಬ್' ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ಪಂಜಾಬಿ ಸಕ್ರಿಯ ಪಾತ್ರವಹಿಸಬೇಕು. ಪಂಜಾಬ್ ಹಸಿರು ಕ್ರಾಂತಿಯ ಕೇಂದ್ರವಾಗಿದೆ. ಈಗ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಇಡೀ ದೇಶಕ್ಕೆ ಹೊಸ ಮಾರ್ಗವನ್ನು ತೋರಿಸಲಿದೆ ಎಂದು ಭಗವಂತ್ ಮಾನ್ ಹೇಳಿದರು.
ಇದನ್ನೂ ಓದಿ: Guarantee scheme: ಗೃಹ ಜ್ಯೋತಿ ಯೋಜನೆಗೆ ಮೊದಲ ದಿನ 55 ಸಾವಿರ ಗ್ರಾಹಕರ ನೋಂದಣಿ