ಗಾಜಿಯಾಬಾದ್: ಜಾನುವಾರುಗಳನ್ನು ಕೊಂದ ಆರೋಪದ ಮೇಲೆ ಬಂಧನ ಮಾಡಲು ಹೋದ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿ ಶಾನು (26) ಎಂಬಾತ ತನ್ನ ಸಹಚರನೊಂದಿಗೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಕೂಡ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಆರೋಪಿಯ ಬಲಗಾಲಿಗೆ ಗಾಯವಾಗಿದೆ ಎಂದು ಘಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಈರಾಜ್ ರಾಜ ಮಾಹಿತಿ ನೀಡಿದ್ದಾರೆ.
ಕವಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೂರಿ ಮತ್ತು ಅವಂತಿಕಾ ಕಾಲೋನಿಯ ಕಾಜಿಪುರ ಕೈಗಾರಿಕಾ ಪ್ರದೇಶದ ನಿವಾಸಿಗಳು ದನಗಳ ಮೃತದೇಹಗಳನ್ನು ಗಮನಿಸಿದ್ದಾರೆ. ನಂತರ ಕೆಲವು ಸಂಘಟನೆಗಳು ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿವೆ. ಹಾಗೆಯೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
ಈ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಮುಂಜಾನೆ ಮಸೂರಿಯ ನಹಲ್ ಗ್ರಾಮದ ಸಣ್ಣ ರಾಜವಾಹಾ ಕಾಲುವೆಯ ಬಳಿ ಜಾನುವಾರು ವಧಿಸಲು ಮುಂದಾಗುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧನ ಮಾಡಲು ಮುಂದಾಗಿದ್ದಾರೆ. ಆ ವೇಳೆ ಇಬ್ಬರೂ ಕೂಡ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಕೂಡ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಮಸೂರಿಯ ದಸ್ನಾ ಪಟ್ಟಣದ ನಿವಾಸಿ ಶಾನು ಎಂದು ಗುರುತಿಸಲಾಗಿದ್ದು, ಆತನ ಸಹಚರ ಬಿಲಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.