ಭಾರತ್ಪುರ: ರಾಜಸ್ಥಾನದಲ್ಲಿ ವೈದ್ಯ ದಂಪತಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ನಿನ್ನೆ ಮಧ್ಯರಾತ್ರಿ ಕರೌಲಿ ಪೊಲೀಸರಿಗೆ ಶರಣಾಗಿದ್ದಾನೆ.
ಭಾರತ್ಪುರ, ಧೋಲ್ಪುರ್, ಮತ್ತು ಕರೌಲಿ ಪೊಲೀಸರು ಈತನನ್ನು ಬಂಧಿಸಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಹಿನ್ನೆಲೆ ಆರೋಪಿ ಮಹೇಶ್ ಮಸಲ್ಪುರ ಪ್ರದೇಶದಲ್ಲಿ ಶರಣಾಗಿದ್ದಾನೆ.
ಮೂಲಗಳ ಪ್ರಕಾರ, ಆರೋಪಿ ಕರೌಲಿ ಜಿಲ್ಲೆಯ ಮಸಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಿರೈತಾ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಬಂಧಿಸಲಾದ ಆರೋಪಿಯನ್ನು ಇಂದು ಪೊಲೀಸರು ಭಾರತ್ಪುರಕ್ಕೆ ಕರೆದೊಯ್ಯಲಿದ್ದಾರೆ.
ನಿನ್ನೆ ಭರತ್‌ಪುರ ಮತ್ತು ಧೋಲ್‌ಪುರ ಪೊಲೀಸರು ಜಿಲ್ಲೆಯ ಡ್ಯಾಂಗ್ ಪ್ರದೇಶದಲ್ಲಿ ಹಾಗೂ ಗರ್ಹಿ ಬಜ್ನಾ, ಬೈಸೋರಾ, ಜೈಸೋರಾ ಇತ್ಯಾದಿಗಳನ್ನು ಒಳಗೊಂಡಂತೆ ದಿನವಿಡೀ ಶೋಧ ಕಾರ್ಯಾಚರಣೆ ನಡೆಸಿದ್ದರು.
ಮೇ 28 ರಂದು ಅನುಜ್ ಗುರ್ಜರ್ ಮತ್ತು ಮಹೇಶ್ ಎಂಬ ಇಬ್ಬರು ಆರೋಪಿಗಳು ಭರತ್‌ಪುರದ ಕಾಳಿ ಬಾಗ್ಚಿ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿಯೇ ಡಾ.ಸಂದೀಪ್ ಗುಪ್ತಾ ಮತ್ತು ಡಾ.ಸೀಮಾ ಗುಪ್ತಾ ಅವರನ್ನು ಕಾರಿನಲ್ಲಿ ಗುಂಡಿಕ್ಕಿ ಕೊಂದಿದ್ದರು.