ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ 350ರ ಗಡಿ ದಾಟಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲೂ ಹೊಸ ವೈರಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗಿಗಳಿಗೆ ಯಾವೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಕುರಿತಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿರುವ ಲೋಕ ನಾಯಕ ಆಸ್ಪತ್ರೆಯಲ್ಲಿ 40 ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇದರಲ್ಲಿ 19 ಸೋಂಕಿತರು ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇವರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ಖುದ್ದಾಗಿ ಮಾಹಿತಿ ಹಂಚಿಕೊಂಡಿರುವ ವೈದ್ಯರು, ಮುಲ್ಟಿ ವಿಟಮಿನ್(multi-vitamins) ಹಾಗೂ ಪ್ಯಾರಸಿಟಮಾಲ್ ಮಾತ್ರೆ (paracetamol tablets) ನೀಡುತ್ತಿರುವುದಾಗಿ ತಿಳಿಸಿದ್ದು, ಬೇರೆ ಯಾವುದೇ ಔಷಧಗಳ ಅವಶ್ಯಕತೆ ಇಲ್ಲ ಎಂದಿದ್ದಾರೆ.
ವಿದೇಶಗಳಿಂದ ವಾಪಸ್ ಆಗಿರುವ ಬಹುತೇಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಹೆಚ್ಚಿನ ಸೋಂಕಿತರು ಲೋಕ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಮಿಕ್ರಾನ್ ಸೋಂಕಿತರಲ್ಲಿ ಗಂಟಲು ನೋವು, ಸ್ವಲ್ಪ ಪ್ರಮಾಣದ ಜ್ವರ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಮೊಬೈಲ್ನಲ್ಲಿ ವಿಡಿಯೋ ನೋಡಿ ನೇಣು ಹಾಕಿಕೊಂಡ 7ನೇ ಕ್ಲಾಸ್ ವಿದ್ಯಾರ್ಥಿ
ಒಮಿಕ್ರಾನ್ ಸೋಂಕು ಕಾಣಿಸಿಕೊಂಡವರಲ್ಲಿ ಬಹುತೇಕರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ಮೂವರು ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಲ್ಲಿಯವರೆಗೆ 67 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ 23 ಜನರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ಇಲ್ಲಿಯವರೆಗೆ 358 ಜನರಲ್ಲಿ ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿದ್ದು, ಈ ಪೈಕಿ 114 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂಬ ಮಾಹಿತಿಯನ್ನ ಖುದ್ದಾಗಿ ಕೇಂದ್ರ ಸರ್ಕಾರ ನೀಡಿದೆ.