ನವದೆಹಲಿ: ಕೋವಿಡ್ ರೂಪಾಂತರಿ ಒಮಿಕ್ರಾನ್ ದೇಶದಲ್ಲಿ ಇದೀಗ ಸಮುದಾಯ ಪ್ರಸರಣದ ಹಂತದಲ್ಲಿದೆ ಎಂದು ಇಂಡಿಯನ್ ಸಾರ್ಸ್-ಕೋವ್-2 ಜೆನೊಮಿಕ್ ಸೀಕ್ವೆನ್ಸಿಂಗ್ ಕಾನ್ಸೋರ್ಟಿಯಮ್ - (INSACOG) ಹೇಳಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಗರಿಷ್ಠ ಮಟ್ಟದಲ್ಲಿ ಕಂಡು ಬರುತ್ತಿರುವ ಬೆನ್ನಲ್ಲೇ ಜೆನೊಮಿಕ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಾ ತನ್ನ ಬುಲೆಟಿನ್ನಲ್ಲಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ಒಮಿಕ್ರಾನ್ ಪ್ರಕರಣಗಳು ಈಗಾಗಲೇ ಹೆಚ್ಚಾಗಿವೆ. ಹೊಸ ಪ್ರಕರಣಗಳು ಹೆಚ್ಚಾಗಲಿವೆ ಎಂದಿದ್ದು, ಭಾರತದಲ್ಲಿನ ಈ ವೈರಸ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ತಡೆಗಟ್ಟಲು ಪರಿಷ್ಕೃತ ಮಾದರಿ ಮತ್ತು ಅನುಕ್ರಮ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಐಎನ್‌ಎಸ್‌ಎಸಿಒಜಿ ಸ್ಪಷ್ಟಪಡಿಸಿದೆ.
ಲಸಿಕೆ ಪಡೆಯದವರ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ..? ಇಲ್ಲಿಯವರೆಗೆ ಹೆಚ್ಚಿನ ಒಮಿಕ್ರಾನ್ ಪ್ರಕರಣಗಳು ಲಕ್ಷಣರಹಿತ ಅಥವಾ ಸೌಮ್ಯವಾಗಿವೆ. ಲಸಿಕೆ ಪಡೆದಿರುವುದರಿಂದ ಹೆಚ್ಚಿನ ಅಪಾಯದ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಲಸಿಕೆ ಪಡೆಯದವರ ವಿಷಯದಲ್ಲಿ ಒಮಿಕ್ರಾನ್ ಸೌಮ್ಯವಾಗಿರುತ್ತದೆ ಅಂತ ತಿಳಿಯಬಾರದು. ಸೋಂಕು ವೇಗವಾಗಿ ಹರಡುತ್ತಿರುವುದರಿಂದ ನಿರಂತರ ಜಾಗರೂಕತೆಯಿಂದ ಇರಬೇಕಾದ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ.
ಐಎನ್‌ಎಸ್‌ಎಸಿಒಜಿ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗ ಜಂಟಿಯಾಗಿ ಸ್ಥಾಪಿಸಿರುವ ಸಂಸ್ಥೆಯಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ