ನವದೆಹಲಿ: ವಿಶ್ವವನ್ನೇ ಆವರಿಸಿಕೊಂಡಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ತಳಿ ಬಗ್ಗೆ ಜನರು ಅಷ್ಟಾಗಿ ತಲೆಕೆಡಿಕೊಂಡಿಲ್ಲ. ಕೊರೊನಾದ ಎಲ್ಲ ಹೊಸ ತಳಿಗಳಂತೆ ಇದು ಕೂಡ ಒಂದು ಎಂದು ಭಾವಿಸಲಾಗಿದೆ. ಆದರೆ, ಒಮಿಕ್ರಾನ್ ವೈರಸ್ ನಾವು ಅಂದುಕೊಂಡಷ್ಟು ಸೌಮ್ಯವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಸಾವು, ಸೋಂಕಿನ ವ್ಯಾಪಕತೆ ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ ನೀಡಿದೆ.
ಒಮಿಕ್ರಾನ್ ಹರಡುವಿಕೆಯ ಸರಾಸರಿ ಕಡಿಮೆ ಇದೆ. ಇದು ಸೌಮ್ಯ ಲಕ್ಷಣವುಳ್ಳ ಸೋಂಕಾಗಿದೆ ಎಂಬುದು ತಪ್ಪು ಗ್ರಹಿಕೆಯಾಗಿದೆ. ಈ ವೈರಸ್ ಬಗೆಗಿನ ತಾತ್ಸಾರ ಹೀಗೇಯೇ ಮುಂದುವರಿದಲ್ಲಿ ಆಸ್ಪತ್ರೆಗೆ ದಾಖಲು ಪ್ರಮಾಣ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಳ್ಳಲಿದೆ ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.
ಒಮಿಕ್ರಾನ್ ಸದ್ದಿಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹರಡುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಮುಂದಿನ ಕೆಲ ವಾರಗಳು ಆರೋಗ್ಯ ವ್ಯವಸ್ಥೆಗೆ ಸವಾಲಿನ ದಿನಗಳಾಗಿರಲಿವೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ವಹಿಸಲೇಬೇಕು. ಇದರಿಂದ ಮಾತ್ರ ಆರೋಗ್ಯ ಕ್ಷೇತ್ರದ ಮೇಲೆ ಬೀಳುವ ಒತ್ತಡವನ್ನು ತಗ್ಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಮಿಕ್ರಾನ್ ಅಲ್ಲದೇ ಯಾವುದೇ ತಳಿಗಳು ಮಾನವ ಆರೋಗ್ಯಕ್ಕೆ ಅಪಾಯಕಾರಿ. ಇವು ಸಾವು, ಸೋಂಕಿನ ವ್ಯಾಪಕತೆ ವಿಪರೀತಗೊಳಿಸಲಿದೆ. ಹೀಗಾಗಿ ಸೋಂಕಿನ ವಿರುದ್ಧ ಹೋರಾಡಲು ನಮಗಿರುವ ಒಂದೇ ಹಾದಿಯಾದ ಲಸಿಕೆಯನ್ನು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಡ್ಡರು ಮದುವೆಯಾಗ್ತಾರೆ, ವಿವೇಕಿಗಳು ಪ್ರೀತಿಯಲ್ಲೇ ಇರ್ತಾರೆ.. ಇದು ಆರ್ಜಿವಿ ವೇದಾಂತ