ನವದೆಹಲಿ: ಡೆಲ್ಟಾ ಮತ್ತು ಬೀಟಾ ತಳಿಗಳಿಗೆ ಹೋಲಿಸಿದರೆ ಕೊರೊನಾ ವೈರಸ್ನ ಒಮಿಕ್ರೋನ್ ರೂಪಾಂತರಿಯು ಮರು ಸೋಂಕನ್ನು ಉಂಟುಮಾಡುವ ಸಾಧ್ಯತೆ ಮೂರು ಪಟ್ಟು ಹೆಚ್ಚು ಎಂದು ದಕ್ಷಿಣಾ ಆಫ್ರಿಕಾದ ವಿಜ್ಞಾನಿಗಳ ಪ್ರಾಥಮಿಕ ಅಧ್ಯಯನವೊಂದು ತಿಳಿಸಿದೆ.
B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಬಳಿಕ ಈ ರೂಪಾಂತರಿ ಕೇಸ್ಗಳು ಭಾರತ ಸೇರಿದಂತೆ 25 ರಾಷ್ಟ್ರಗಳಲ್ಲಿ ವರದಿಯಾಗಿದೆ.
ಒಮಿಕ್ರೋನ್, ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಹೇಳಲಾಗಿದ್ದು, ಇದರ ವಿರುದ್ಧ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಒಮಿಕ್ರೋನ್ ತಡೆಗೆ ಡೆಲ್ಟಾ ಮಾದರಿಯಲ್ಲೇ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ - ವಿಶ್ವ ಆರೋಗ್ಯ ಸಂಸ್ಥೆ
ನವೆಂಬರ್ 29ರ ವರೆಗೆ ಕೋವಿಡ್ ಪಾಸಿಟಿವ್ ಬಂದ 2.8 ಮಿಲಿಯನ್ ಜನರಲ್ಲಿ 35,670 ಮಂದಿಗೆ ಮರು ಸೋಂಕು ತಗುಲಿದೆ. ಕೊರೊನಾದಿಂದ ಗುಣಮುಖರಾದವರಿಗೆ 90 ದಿನಗಳ ಅಂತರದಲ್ಲಿ ಮತ್ತೆ ವೈರಸ್ ಅಂಟಿದವರು ಇವರಾಗಿದ್ದಾರೆ.
ಒಮಿಕ್ರೋನ್ ರೂಪಾಂತರಿಯು ಮರು ಸೋಂಕನ್ನು ಉಂಟುಮಾಡುವ ಸಾಧ್ಯತೆ ಮೂರು ಪಟ್ಟು ಹೆಚ್ಚಿದೆ. ಆದರೆ ಸೋಂಕಿನ ಇತಿಹಾಸ ಹೊಂದಿರುವ ವ್ಯಕ್ತಿಗೆ ಒಮಿಕ್ರೋನ್ನೊಂದಿಗೆ ಸಂಬಂಧಿಸಿದ ರೋಗದ ತೀವ್ರತೆ ಬಗ್ಗೆ ಹಾಗೂ ವ್ಯಾಕ್ಸಿನೇಷನ್ ಸ್ಥಿತಿಗತಿ ಬಗ್ಗೆ ತುರ್ತಾಗಿ ಮಾಹಿತಿ ಅಗತ್ಯವಿದೆ ಎಂದು ದಕ್ಷಿಣಾ ಆಫ್ರಿಕಾದ DSI-NRF ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಪಿಡೆಮಿಯೋಲಾಜಿಕಲ್ ಮಾಡೆಲಿಂಗ್ ಮತ್ತು ಅನಾಲಿಸಿಸ್‌ನ ನಿರ್ದೇಶಕಿ ಜೂಲಿಯೆಟ್ ಪುಲ್ಲಿಯಂ ಹೇಳಿದ್ದಾರೆ.