ಥಾಣೆ (ಮಹಾರಾಷ್ಟ್ರ): ರೈಲು ಬರುತ್ತಿದ್ದ ಹಳಿ ಮೇಲೆ ಹಾರಿ ಆತ್ಯಹತ್ಯೆಗೆ ಯತ್ನಿಸಿದ ವೃದ್ಧನನ್ನು ರಕ್ಷಿಸುವಲ್ಲಿ ರೈಲು ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ಥಾಣೆಯ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ದೃಶ್ಯ ಮೈ ಝಲ್ ಎನಿಸುವಂತಿದೆ.
ಹರಿಪ್ರಸಾದ್ ಶಂಕರ್ ಕರಣ್ ಪ್ರಾಣಾಪಾಯದಿಂದ ಪಾರಾಗಿರುವ ವೃದ್ಧ. ಈಸ್ಟ್ ಕಲ್ಯಾಣ್‌ದ ಅಡ್ವಾಲಿ-ಧೋಕಾರಿ ಗ್ರಾಮದ ನಿವಾಸಿ. ನಿನ್ನೆ ಮಧ್ಯಾಹ್ನ ಮುಂಬೈಯಿಂದ ವಾರಣಾಸಿಗೆ ತೆರಳುತ್ತಿದ್ದ ಮಹಾನಗರಿ ಎಕ್ಸ್‌ಪ್ರೆಸ್ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ನಂ 4ರಿಂದ ಹೊರಟಿತ್ತು. ಈ ವೇಳೆ ಸ್ವಲ್ಪ ದೂರದಲ್ಲಿ ವೃದ್ಧ ಹರಿಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಹಳಿ ಮೇಲೆ ಬಂದು ನಿಂತಿದ್ದಾನೆ.
ಕೂಡಲೇ ಇದನ್ನು ಗಮನಿಸಿದ ರೈಲು ಚಾಲಕ ಎಸ್ ಕೆ ಪ್ರಧಾನ್ ಎರಡ್ಮೂರು ಬಾರಿ ಹಾರ್ನ್ ಮಾಡಿದ್ದಾರೆ. ಆದರೂ ವೃದ್ಧ ಹಳಿಯಿಂದ ಪಕ್ಕಕ್ಕೆ ಸರಿಯಲಿಲ್ಲ. ರೈಲು ಸಮೀಪಕ್ಕೆ ಬರುವವರೆಗೆ ಅಲ್ಲೇ ನಿಂತಿದ್ದಾನೆ. ಚಾಲಕ ಎಸ್.ಕೆ. ಪ್ರಧಾನ್ ಮತ್ತು ಸಹಾಯಕ ಚಾಲಕ ರವಿಶಂಕರ್ ತಮ್ಮ ಎಲ್ಲ ಕೌಶಲ್ಯವನ್ನು ಬಳಸಿ ರೈಲನ್ನು ನಿಲ್ಲಿಸಿ ವೃದ್ಧನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳ: ಬೆಳಗಾವಿಯ ರೈಲು, ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ
ಈ ವೇಳೆಗಾಗಲೇ ಎಕ್ಸ್‌ಪ್ರೆಸ್‌ನ ಇಂಜಿನ್‌ನ ಮುಂಭಾಗವು ವೃದ್ಧ ಹರಿಪ್ರಾಸದ್ ದೇಹದ ಮೂಲಕ ಹಾದುಹೋಗಿದೆ. ಆದರೆ, ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾನೆ. ನಂತರ ಎಂಜಿನ್ ಕೆಳಗಡೆ ಸಿಲುಕಿದ್ದ ಹರಿಪ್ರಸಾದ್‌ರನ್ನು ಸುರಕ್ಷಿತವಾಗಿ ಹಳಿಯಿಂದ ಹೊರ ತಂದಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸದ್ಯ ರೈಲು ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವೃದ್ಧ ಸಾವಿನ ದವಡೆಯಿಂದ ಪಾರಾಗಿದ್ದಾನೆ.