ಲತೇಹರ್ (ಜಾರ್ಖಂಡ್): ವಾಮಾಚಾರದಲ್ಲಿ ತೊಡಗಿದ ಆರೋಪದ ಮೇಲೆ ವೃದ್ಧ ದಂಪತಿಯನ್ನು ಸ್ಥಳೀಯರು ಹೊಡೆದು ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ ಲತೇಹರ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಚಾಂದ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಫೈಸಲ್ ಗ್ರಾಮದ ನಿವಾಸಿಗಳಾದ ಸಿಬಲ್ ಗಂಜು ಮತ್ತು ಪತ್ನಿ ಬೋನಿ ದೇವಿ ಎಂದು ಗುರುತಿಸಲಾಗಿದೆ.
ಸಿಬಲ್ ಗಂಜು ಮತ್ತು ಬೋನಿ ದೇವಿ ದಂಪತಿ ಗ್ರಾಮಸ್ಥರಿಗೆ ಕೇಡು ಮಾಡುವ ಉದ್ದೇಶದಿಂದ ವಾಮಾಚಾರ ನಡೆಸುತ್ತಿದ್ದಾರೆ ಎಂಬ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ, ಮಂಗಳವಾರ ರಾತ್ರಿ ಇಬ್ಬರನ್ನು ಹಿಡಿದು ಗ್ರಾಮದ ಹಿರಿಯ ಪಂಚಾಯಿತಿ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಇಬ್ಬರಿಗೂ ದೊಣ್ಣೆಗಳಿಂದ ಥಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದರಂತೆ ಗ್ರಾಮಸ್ಥರು ದಾಳಿ ಮಾಡಿದಾಗ ದಂಪತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಾರು ಜನ ಗ್ರಾಮಸ್ಥರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ, ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಷ್ಟ ಕಾಲದಲ್ಲಿ ಮಗು ಮಾರಾಟ; ಕಂದನ ನೆನಪು ಕಾಡಿ, ಮರಳಿ ಕೇಳಿದ್ದಕ್ಕೆ ತಾಯಿ ಹತ್ಯೆ!
ಪಶ್ಚಿಮ ಬಂಗಾಳದಲ್ಲಿ ದಂಪತಿ ಹತ್ಯೆ: ಮತ್ತೊಂದೆಡೆ, ಕಳೆದ ಮಾರ್ಚ್ನಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲೂ ಇಂತಹದ್ದೆ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇಲ್ಲಿನ ನೋಪಾರಾ ಗ್ರಾಮದಲ್ಲಿ ವಾಮಾಚಾರದ ಶಂಕೆಯಿಂದ ವಯೋವೃದ್ಧ ಬುಡಕಟ್ಟು ದಂಪತಿಯನ್ನು ಗ್ರಾಮದ ಕೆಲವರು ಹತ್ಯೆ ಮಾಡಿದ್ದರು. ಮೃತರನ್ನು ಪಾಂಡ್ರು ಹೆಂಬ್ರೋಮ್ (62) ಮತ್ತು ಪಾರ್ವತಿ ಹೆಂಬ್ರೋಮ್ (52) ಎಂದು ಗುರುತಿಸಲಾಗಿತ್ತು. ಜನರ ದಾಳಿಯಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಬೋಲ್ಪುರ್ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಹ ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಘಟನೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಮಾಂತ್ರಿಕನ ಪೊಳ್ಳು ಮಾತು ನಂಬಿ 10 ವರ್ಷದ ಬಾಲಕನ ನರಬಲಿ; ಮೂವರ ಬಂಧನ
ಛತ್ತೀಸ್‌ಗಢದಲ್ಲಿ ನಡೆದಿತ್ತು ವ್ಯಕ್ತಿಯ ಕೊಲೆ: ಈ ಹಿಂದೆ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ 50 ವರ್ಷದ ವ್ಯಕ್ತಿಯೊಬ್ಬನನ್ನೂ ಸಹ ವಾಮಾಚಾರದಲ್ಲಿ ತೊಡಗಿಸಿಕೊಂಡಿದ್ದಾನೆಂಬ ಶಂಕೆ ಮೇಲೆ ಜನರ ಗುಂಪೊಂದು ಥಳಿಸಿ ಕೊಲೆ ಮಾಡಿತ್ತು. ಇಲ್ಲಿನ ಚಾರ್ಗೋನ್‌ನಲ್ಲಿ ಫೆಬ್ರವರಿ 22ರ ರಾತ್ರಿ ಮಂಚಿತ್ ಕಶ್ಯಪ್ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಈ ಕೊಲೆ ಪ್ರಕರಣದಲ್ಲಿ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲೂ ಮಾಂತ್ರಿಕನೊಬ್ಬ ನರಬಲಿ ಕೊಡುವಂತೆ ಕೇಳಿದ್ದ ಮಾತು ನಂಬಿ 10 ವರ್ಷದ ಬಾಲಕನನ್ನು ಅಮಾನವೀಯವಾಗಿ ಕೊಂದು ಹಾಕಿದ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ: ವಾಮಾಚಾರ ಶಂಕೆ... ಬುಡಕಟ್ಟು ಜನಾಂಗದ ವಯೋವೃದ್ಧ ದಂಪತಿ ಕೊಲೆ