ಬಾಲಸೋರ್: ಭೀಕರ ರೈಲು ಅಪಘಾತ ಸಂಭವಿಸಿ 7 ದಿನಗಳ ಬಳಿಕ ಇಂದು ಶಾಲಾ ಆಡಳಿತ ಸಮಿತಿಯ ಸಮ್ಮುಖದಲ್ಲಿ ಬಹನಾಗ ಪ್ರೌಢಶಾಲಾ ಕಟ್ಟಡ ನೆಲಸಮ ಮಾಡುವ ಕಾರ್ಯ ಆರಂಭವಾಗಿದೆ. ಈ ಪ್ರೌಢಶಾಲೆಯನ್ನು ತಾತ್ಕಾಲಿಕ ಶವಾಗಾರವನ್ನಾಗಿ ಬಳಸಲಾಗಿದ್ದು, ಒಡಿಶಾದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಈ ಪ್ರೌಢಶಾಲೆಯಲ್ಲಿ ಇರಿಸಲಾಗಿತ್ತು.
ಶಾಲೆಯಲ್ಲಿ ಮೃತದೇಹಗಳನ್ನು ಇರಿಸಿದ್ದ ಕಾರಣ, ಈಗ ಎಲ್ಲ ಮೃತದೇಹಗಳನ್ನು ತೆರವು ಮಾಡಲಾಗಿದೆ. ಆದರೆ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಯ ಹುಟ್ಟಿಸಿರುವ ಶಾಲೆಯ ವಾತಾವರಣವನ್ನು ಬದಲಾವಣೆ ಮಾಡಲು ಸರಕಾರ ಹಾಗೂ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಭೀಕರ ತ್ರಿವಳಿ ರೈಲು ಅಪಘಾತದ ನಂತರ ಮೃತದೇಹಗಳನ್ನು ಶಾಲೆಯಲ್ಲೇ ಇಡಲಾಗಿದ್ದು, ಮಕ್ಕಳಲ್ಲಿ ಕೊಂಚ ಭಯ ಉಂಟಾಗಿತ್ತು. ಇದಕ್ಕಾಗಿ ಶಾಲಾ ಆಡಳಿತ ಸಮಿತಿಯು ಶಾಲಾ ಕಟ್ಟಡವನ್ನು ಕೆಡವಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಬಳಿಕ ಜಿಲ್ಲಾಡಳಿತ ಶಾಲಾ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದೆ. ಶಾಲಾ ಕಟ್ಟಡವನ್ನು ಕೆಡವಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ದತ್ತಾತ್ರೇಯ ಭೌಸಾಹೇಬ್ ಶಿಂಧೆ ಬಹನಾಗ ಪ್ರೌಢಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಹನಾಗ ರೈಲು ಅಪಘಾತದ ನಂತರ ಶವಗಳನ್ನು ಇಲ್ಲಿ ಇರಿಸಲಾಗಿತ್ತು. ಹಾಗಾಗಿ ಶಾಲಾ ಕಟ್ಟಡವನ್ನು ಕೆಡವುವಂತೆ ನಾವು ಒತ್ತಾಯಿಸಿದ್ದೆವು ಎಂದು ಬಹನಾಗ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಜೂನ್ 2ರಂದು ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ಭೀಕರ ರೈಲು ದರುಂತದಲ್ಲಿ 275 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಶುಕ್ರವಾರ ರಾತ್ರಿ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಹೊರಟು ಚೆನ್ನೈಗೆ ಹೋಗುತ್ತಿದ್ದ ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಬಹನಾಗ ಬಳಿ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ 12 ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿ ಮೇಲೆ ಬಿದ್ದಿತ್ತು. ಅದೇ ಸಮಯಕ್ಕೆ ಆ ಮಾರ್ಗವಾಗಿ ಬೆಂಗಳೂರಿನಿಂದ ಬರುತ್ತಿದ್ದ ಹೌರಾ ಎಕ್ಸ್ಪ್ರೆಸ್ ಅಲ್ಲಿದ್ದ ಬೋಗಿಗಳಿಗೆ ಗುದ್ದಿತ್ತು. ರಭಸವಾಗಿ ಬರುತ್ತಿದ್ದ ಕಾರಣ ಹೌರಾ ಎಕ್ಸ್ಪ್ರೆಸ್ ನಾಲ್ಕು ಬೋಗಿಗಳು ಹಳಿ ತಪ್ಪಿ ಕೆಳಕ್ಕೆ ಉರುಳಿದ್ದವು.
ರೈಲಿನಲ್ಲಿದ್ದ ಅನೇಕ ಮಂದಿಯ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯಾರು ಯಾವ ರೈಲಿನ ಪ್ರಯಾಣಿಕರು ಎನ್ನುವುದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಮೃತದೇಹಗಳನ್ನ ಬಾಲಸೋರ್, ಭದ್ರಕ್ ಜಿಲ್ಲಾಸ್ಪತ್ರೆಗಳು ಸೇರಿದಂತೆ ಇತರ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿತ್ತು.
ಅಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧ ಪಟ್ಟವರಿಗೆ ಒದಗಿಸಲಾಗುತ್ತಿತ್ತು. ಇನ್ನು ಕೆಲವು ಗುರುತು ಸಿಗದ ಮೃತದೇಹಗಳನ್ನು ಸಂಬಂಧಿಕರು ಬರುವವರೆಗೆ ಪಕ್ಕದಲ್ಲೇ ಇದ್ದ ಬಹನಾಗ ಪ್ರೌಢಶಾಲೆಯಲ್ಲಿ ಇರಿಸಲಾಗಿತ್ತು. ಬೇರೆ ರಾಜ್ಯಗಳಲ್ಲಿರುವ ಸಂಬಂಧಿಕರು ಬಂದು ಮೃತದೇಹಗಳನ್ನುಪತ್ತೆ ಹಚ್ಚಿ ಕೊಂಡೊಯ್ಯುವವರೆಗೆ ಅಲ್ಲೇ ಇದ್ದ ಕಾರಣ, ಶಾಲೆ ಶವಾಗಾರವಾಗಿ ಮಾರ್ಪಾಟಾಗಿತ್ತು. ಆ ಭಯದ ವಾತಾವರಣದಲ್ಲಿ ಕುಳಿ ಪಾಠ ಕೇಳಲು ಮಕ್ಕಳು ತಯಾರಿಲ್ಲದ ಕಾರಣ ಇದೀಗ ಸರ್ಕಾರ ಶಾಲಾ ಕಟ್ಟಡವನ್ನು ಕೆಡವಿದೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತ:ಇನ್ನೂ ಸಿಗದ 101 ಮೃತದೇಹಗಳ ಗುರುತು..55 ಶವ ಸಂಬಂಧಿಕರಿಗೆ ಹಸ್ತಾಂತರ