ನವದೆಹಲಿ/ಬಾಲಸೋರ್: ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ಭೀಕರ ಅಪಘಾತದಿಂದ ದಕ್ಷಿಣ ಮತ್ತು ಆಗ್ನೇಯ ರೈಲ್ವೆ ವಲಯಗಳ ವ್ಯಾಪ್ತಿಯ ಸುಮಾರು 90 ರೈಲುಗಳನ್ನು ರದ್ದು ಮಾಡಲಾಗಿದೆ. 46 ಮಾರ್ಗಗಳನ್ನು ಬದಲಾಯಿಸಲಾಗಿದೆ. 11 ರೈಲುಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದೇ ವೇಳೆ ಒಡಿಶಾದಿಂದ ಹೊರಹೋಗುವ ವಿಮಾನಗಳ ಟಿಕೆಟ್ ದರ ಜಾಸ್ತಿ ಮಾಡದಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ಎರಡು ವಲಯಗಳು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಆಗ್ನೇಯ ರೈಲ್ವೆಯು ಚೆನ್ನೈ-ಹೌರಾ ಮೇಲ್, ದರ್ಭಾಂಗ-ಕನ್ನಿಯಾಕುಮಾರಿ ಎಕ್ಸ್‌ಪ್ರೆಸ್ ಮತ್ತು ಕಾಮಾಖ್ಯ-ಎಲ್‌ಟಿಟಿ ಎಕ್ಸ್ಪ್ರೆಸ್ನಂತಹ ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೂನ್ 4ರಂದು ಪ್ರಾರಂಭವಾಗುವ ಪಟ್ನಾ-ಪುರಿ ವಿಶೇಷ ರೈಲನ್ನು ಸಹ ರದ್ದು ಮಾಡಿದೆ.
ನಿನ್ನೆ (ಶನಿವಾರ) ರಾತ್ರಿ 11 ಗಂಟೆಗೆ ಮಂಗಳೂರಿನಿಂದ ಹೊರಡಬೇಕಿದ್ದ ಮಂಗಳೂರು-ಸಂತ್ರಗಾಚಿ ವಿವೇಕ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಜೂನ್ 4ರಂದು ರಾತ್ರಿ 7.00 ಗಂಟೆಗೆ ಚೆನ್ನೈನಿಂದ ಹೊರಡುವ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಶಾಲಿಮಾರ್ ಕೋರಮಂಡಲ್ ಎಕ್ಸ್‌ಪ್ರೆಸ್, ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಸಂತ್ರಗಾಚಿ ಎಸಿ ಸೂಪರ್‌ಫಾಸ್ಟ್ ರೈಲು ಮುಂತಾದ ರೈಲುಗಳನ್ನು ದಕ್ಷಿಣ ರೈಲ್ವೆ ರದ್ದುಗೊಳಿಸಲಾಗಿದೆ.
ಶನಿವಾರ 5.15ಕ್ಕೆ ಹೊರಡಬೇಕಿದ್ದ ರಂಗಪಾರದಿಂದ ಪ್ರಯಾಣಿಸುವ ರಂಗಪಾರ ಉತ್ತರ-ಈರೋಡ್ ಸೂಪರ್‌ಫಾಸ್ಟ್ ವಿಶೇಷ ರೈಲು ರದ್ದುಗೊಂಡಿದೆ. ಜೂನ್ 6ರಂದು 06.20ಕ್ಕೆ ಗುವಾಹಟಿಯಿಂದ ಹೊರಡಬೇಕಿದ್ದ ಗುವಾಹಟಿ-ಎಂ.ವಿಶ್ವೇಶ್ವರಯ್ಯ ಬೆಂಗಳೂರು ಟ್ರೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಜೂನ್ 7ರಂದು 2 ಗಂಟೆಗೆ ಕಾಮಾಖ್ಯದಿಂದ ಹೊರಡಬೇಕಿದ್ದ ಕಾಮಾಖ್ಯ-ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ಎಸಿ ರೈಲು ಸಂಚಾರ ಮೊಟಕುಗೊಂಡಿದೆ.
ಇದನ್ನೂ ಓದಿ: ಭಾರತೀಯ ರೈಲ್ವೇ ಇತಿಹಾಸದಲ್ಲಿ ಒಡಿಶಾ ರೈಲು ಅಪಘಾತ ಅತ್ಯಂತ ಭೀಕರ!
ಅಪಘಾತದಿಂದಾಗಿ 11 ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ. ಬಹನಾಗಾ ಬಜಾರ್ ಸಮೀಪದಲ್ಲಿ ರೈಲ್ವೆ ದುರಂತದ ಸಂತ್ರಸ್ತ ಪ್ರಯಾಣಿಕರ ಸಂಬಂಧಿಕರನ್ನು ಸಾಗಿಸಲು ಆಗ್ನೇಯ ರೈಲ್ವೆಯು ಹೌರಾದಿಂದ ಬಾಲಸೋರ್‌ಗೆ ಒಂದು ಮೆಮು ವಿಶೇಷ ರೈಲು ಓಡಿಸಿದೆ. ಸಂತ್ರಸ್ತ ಪ್ರಯಾಣಿಕರ ಕುಟುಂಬ ಸದಸ್ಯರಿಗೆ ಚೆನ್ನೈನಿಂದ ಭದ್ರಕ್‌ಗೆ ವಿಶೇಷ ರೈಲನ್ನು ದಕ್ಷಿಣ ರೈಲ್ವೆ ಓಡಿಸುತ್ತಿದೆ.
ವಿಮಾನ ದರ ಏರಿಸದಂತೆ ಸೂಚನೆ: ಭೀಕರ ರೈಲು ಅಪಘಾತದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ವಿಮಾನಯಾನ ಕಂಪನಿಗಳಿಗೆ ವಿಮಾನ ದರ ಏರಿಸದಂತೆ ಸೂಚಿಸಿದೆ. ಭುವನೇಶ್ವರಕ್ಕೆ ಬರುವ ಮತ್ತು ಅಲ್ಲಿಂದ ಬರುವ ವಿಮಾನಗಳ ದರಗಳಲ್ಲಿ ಅಸಾಮಾನ್ಯ ಏರಿಕೆ ಮೇಲೆ ನಿಗಾ ಇಡುವಂತೆಯೂ ಸೂಚಿಸಿ, ದರ ಹೆಚ್ಚಿಸದಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ.
ಭುವನೇಶ್ವರ ಮತ್ತು ರಾಜ್ಯದ ಇತರ ವಿಮಾನ ನಿಲ್ದಾಣಗಳಿಗೆ ಮತ್ತು ಹೊರಹೋಗುವ ವಿಮಾನ ದರಗಳಲ್ಲಿ ಯಾವುದೇ ಅಸಹಜ ಏರಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅದರ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ತಿಳಿಸಿದೆ. ಭುವನೇಶ್ವರಕ್ಕೆ ರದ್ದುಪಡಿಸಲು ಮತ್ತು ಮರುಹೊಂದಿಸಲು ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ಸಚಿವಾಲಯವು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ಕೊಟ್ಟಿದೆ.
ಒಡಿಶಾ ರೈಲು ಅಪಘಾತದಲ್ಲಿ 288 ಮಂದಿ ಪ್ರಯಾಣಿಕರು ದಾರುಣವಾಗಿ ಸಾವಿಗೀಡಾಗಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ರಣಭೀಕರ ತ್ರಿವಳಿ ರೈಲು ದುರಂತದಲ್ಲಿ ಈಗ ಮೃತರ ಗುರುತು ಪತ್ತೆ ಹಚ್ಚುವುದೇ ಸವಾಲು..