ನಯಾಗಢ (ಒಡಿಶಾ): ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರು ಸೇರಿ ಏಳು ಜನರನ್ನು ಒಡಿಶಾದ ನಯಾಗಢ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಬಾಬು ಪರಿದಾ ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆ ಸಂತ್ರಸ್ತೆಯೊಂದಿಗೆ ಪ್ರೇಮದ ನೆಪದಲ್ಲಿ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲದೇ, ಈ ವಿಷಯ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ, ಬಾಲಕಿಯ ಮೇಲೆ ಹಲವು ಬಾರಿ ಹಲ್ಲೆ ಕೂಡ ನಡೆಸಿದ್ದರು.
ಈ ಸಂಬಂಧ ಮಾ.31ರಂದು ಸಂತ್ರಸ್ತೆಯ ತಂದೆಯು ಆರೋಪಿ ಬಾಬು ಪರಿದಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಇದರಿಂದ ಆಕ್ರೋಶಗೊಂಡು ಕಿರಾತಕರು ಸಂತ್ರಸ್ತೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಅಲ್ಲದೇ, ಬಾಲಕಿಯ ತಾಯಿಯ ಮೇಲೂ ಹಲ್ಲೆ ಮಾಡಿದ್ದರು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಲಕಿ ಮತ್ತು ಆಕೆಯ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಬಾಬು ಪರಿದಾ ಮತ್ತು ಐವರು ಮಹಿಳೆಯರು ಸೇರಿ ಏಳು ಜನರನ್ನು ಬಂಧಿಸಿದ್ದಾರೆ. ಇತ್ತ, ಸಂತ್ರಸ್ತೆಯ ಕುಟುಂಬಕ್ಕೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
ಎಲ್ಲಾ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಇತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನೂ ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ: ದುಬೈನಿಂದ ಚಿನ್ನ ತಂದ ಪ್ರಯಾಣಿಕ.. ಈತನಿಗಾಗಿ ಏರ್ಪೋರ್ಟ್ ಹೊರಗೆ ಕಾಯುತ್ತಿದ್ದ ವ್ಯಕ್ತಿ ಇಬ್ಬರೂ ಅರೆಸ್ಟ್