ಭುವನೇಶ್ವರ: ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋಪಾಲ್ ದಾಸ್ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ದೇಶವನ್ನು ತಲ್ಲಣಗೊಳಿಸಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಕೆಲಸದಿಂದ ವಜಾಗೊಂಡು ಬಂಧಿತನಾಗಿರುವ ಆರೋಪಿಯ ವಿರುದ್ಧ ತೀವ್ರ ವಿಚಾರಣೆ ನಡೆಸಲಾಗಿದೆ. ಆರೋಪಿ ಕೊಲೆಯ ಉದ್ದೇಶ ತಿಳಿಯುವ ಸಲುವಾಗಿ ತನಿಖೆಗೆ ಮುಂದಾಗಿರುವ ಪೊಲೀಸರು ಗೋಪಾಲ್ ದಾಸ್ನನ್ನು ನಾರ್ಕೊ ಅನಾಲಿಸಿಸ್ ಮತ್ತು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಒಡಿಶಾದ ಜಾರ್ಸುಗುಡಾ ಜಿಲ್ಲೆಯ ನ್ಯಾಯಾಲಯವು ಬುಧವಾರ ಆರೋಪಿ ಗೋಪಾಲ್ ದಾಸ್‌ನ ಪೊಲೀಸ್ ಕಸ್ಟಡಿಯನ್ನು ಫೆಬ್ರವರಿ 13 ರವರೆಗೆ ವಿಸ್ತರಿಸಿ ಆದೇಶ ನೀಡಿದೆ.
ಜಾರ್ಸುಗುಡಾದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್, ನಾರ್ಕೊ ಆನಾಲಿಸಿಸ್ ಮತ್ತು ಪಾಲಿಗ್ರಾಪ್ ಪರೀಕ್ಷೆಗೆ ಅನುಮತಿ ನೀಡಿದೆ. ಈ ಸಂಬಂಧ ಆರೋಪಿ ಕೂಡ ಪರೀಕ್ಷೆಗೆ ಒಳಗಾಗುವ ಪ್ರಸ್ತಾವನೆಗೆ ಒಪ್ಪಿದ್ದಾರೆ ಎಂದು ಗೋಪಾಲ್ ದಾಸ್ ಅವರ ವಕೀಲ ಹರಿಶಂಕರ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
ಏನಿದು ನಾರ್ಕೊ ಅನಾಸಿಸ್ ಪರೀಕ್ಷೆ: ವಿಚಾರಣೆ ಸಂದರ್ಭದಲ್ಲಿ ವ್ಯಕ್ತಿಯು ಜಾಗೃತ ಸ್ಥಿತಿಯಲ್ಲಿ ಕೆಲವು ಮಾಹಿತಿಗಳನ್ನು ಬಚ್ಚಿಡುವ ಸಾಧ್ಯತೆ ಇರುತ್ತದೆ. ಅಪರಾಧ ಪ್ರಕರಣದಲ್ಲಿ ವ್ಯಕ್ತಿಯ ನೈಜ ಉದ್ದೇಶ ತಿಳಿಯುವ ಸಂಬಂಧ ಯಾವುದೇ ಅಡ್ಡ ಪರಿಣಾಮವಿಲ್ಲದಂತೆ ವ್ಯಕ್ತಿಗೆ ಜ್ಞಾನ ತಪ್ಪಿಸಿ, ಹಿಪ್ನೋಟೆಕ್ ಮೂಡ್ ಮೂಲಕ ಆತನ ನೈಜ ಉದ್ದೇಶ ತಿಳಿಯುವಂತೆ ಸಹಾಯ ಮಾಡುತ್ತದೆ ಈ ಪರೀಕ್ಷೆ.
ಇನ್ನು, ಪಾಲಿಗ್ರಾಫ್ ಪರೀಕ್ಷೆಯಲ್ಲಿ ವ್ಯಕ್ತಿಯು ವಿವಿಧ ಪ್ರಶ್ನೆಗಳನ್ನು ಕೇಳಿದಾಗ ಉಸಿರಾಟದ ದರ, ರಕ್ತದೊತ್ತಡ, ಬೆವರು ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಮೂಲಕ ಯಾವ ವಿಷಯದಲ್ಲಿ ಆತ ಸುಳ್ಳು ಅಥವಾ ನಿಜ ಹೇಳುತ್ತಿದ್ದಾನೆ ಎಂದು ಖಚಿತಪಡಿಸಲು ಈ ಟೆಸ್ಟ್ ನಡೆಸಲಾಗುವುದು.
ಆರೋಪಿಯ ನಾರ್ಕೊ ಅನಾಲಿಸಿಸ್ ಮತ್ತು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸುವ ಸಂಬಂಧ ಅಪರಾಧ ದಳ ಈಗಾಗಲೇ ಆತನನ್ನು ಕೋಲ್ಕತ್ತಾಗೆ ಕರೆದೊಯ್ದಿದ್ದು, ಅಲ್ಲಿಂದ ಗುಜರಾತ್ನ ಗಾಂಧಿನಗರಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಗೋಪಾಲ್ ದಾಸ್ ಅವರನ್ನು ನವದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ನಡೆಸಿದ ಇತರ ಹಲವು ಪರೀಕ್ಷೆಗಳಿಗೆ ಒಳಪಡಿಸಿದೆ. ಇನ್ನು, ಗೋಪಾಲ್ ಬೈಪೊಲಾರ್ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಆರೋಪಿಯ ಮಾನಸಿನ ಸ್ಥಿತಿ ಬಗ್ಗೆ ತಿಳಿಯಲು ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ.
ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳು: ಇನ್ನು, ಈ ಪ್ರಕರಣ ಸಂಬಂಧ ಮೇಲ್ವಿಚಾರಣೆ ನಡೆಸಲಿರುವ ಒಡಿಶಾ ಪೊಲೀಸ್ ಮಹಾನಿರ್ದೇಶಕ ಎಸ್‌ಕೆ ಬನ್ಸಾಲ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾ. ಜೆ ಪಿ ದಾಸ್ ಮೊದಲ ಬಾರಿಗೆ ಸಚಿವರ ಮೇಲೆ ಹತ್ಯೆ ನಡೆಸಿದ ಸ್ಥಳವಾದ ಗಾಂಧಿ ಚೌಕ್ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಈ ಕುರಿತು ಮಾತನಾಡಿದ ಅಧಿಕಾರಿ ಬನ್ಸಾಲ್, ತನಿಖೆ ಪೂರ್ಣಗೊಳ್ಳಲು ಇನ್ನೂ ಕೆಲವು ಸಮಯ ಬೇಕಿದೆ. ನ್ಯಾಯಮೂರ್ತಿ ಜೆಪಿ ದಾಸ್ ಅವರ ಮೇಲ್ವಿಚಾರಣೆಯಲ್ಲಿ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ. ಆರೋಪಿಯ ಮಾನಸಿಕ ಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.