ಭುವನೇಶ್ವರ(ಒಡಿಶಾ): ನಿನ್ನೆ ರಾತ್ರಿ ಬಾಲಸೋರ್‌ನಲ್ಲಿ ನಡೆದ ದುರಂತ ರೈಲು ಅಪಘಾತದ ಹಿನ್ನೆಲೆ ಒಡಿಶಾ ಸರ್ಕಾರ ಇಂದು (ಶನಿವಾರ) ಶೋಕಾಚರಣೆಯನ್ನು ಘೋಷಿಸಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಒಂದು ದಿನದ ಶೋಕಾಚರಣೆ ಘೋಷಿಸಿದ್ದು, ಈ ದಿನದಂದು ರಾಜ್ಯದಲ್ಲಿ ಬೇರೆ ಯಾವುದೇ ಉತ್ಸವ, ಆಚರಣೆಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ರಾಜ್ಯ I&PR ಇಲಾಖೆಯಿಂದ ಅಧಿಕೃತ ಪ್ರಕಟಣೆಯ ಮೂಲಕ ಈ ಘೋಷಣೆ ಮಾಡಲಾಗಿದೆ. ಈಗಿರುವ ವರದಿ ಪ್ರಕಾರ ಘಟನೆಯಲ್ಲಿ ಒಟ್ಟು 233 ಪ್ರಯಾಣಿಕರು ಸಾವನ್ನಪ್ಪಿದ್ದು, ಗಾಯಗೊಂಡವರ ಸಂಖ್ಯೆ 900 ಆಗಿದೆ.
ಇನ್ನು ರೈಲುಗಳು ಹಳಿ ತಪ್ಪಿರುವ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ. ಘಟನೆಯ ಕುರಿತು ವೈಷ್ಣವ್ ಪ್ರತಿಕ್ರಿಯಿಸಿದ್ದು, 'ಅಪಘಾತವು ದುರದೃಷ್ಟಕರವಾಗಿದೆ, ಘಟನೆಯ ಕುರಿತು ಸಚಿವಾಲಯಕ್ಕೆ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ. ಪ್ಯಾಸೆಂಜರ್ ರೈಲು ಬೋಗಿಗಳು ಹಳಿ ತಪ್ಪಲು ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 233ಕ್ಕೆ ಏರಿಕೆ, 900 ಮಂದಿಗೆ ಗಾಯ
ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಸಾಧ್ಯತೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ (ಇಂದು) ಅಪಘಾತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೋಲಾ ಸೇನ್ ತಿಳಿಸಿದ್ದಾರೆ. ನಾವು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ. ನಮ್ಮ ಮುಖ್ಯಮಂತ್ರಿ (ಮಮತಾ ಬ್ಯಾನರ್ಜಿ) ಇಲ್ಲಿಗೆ ಬರಬಹುದು. ಅಪಘಾತದ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಲು ಮಮತಾ ಬ್ಯಾನರ್ಜಿಯವರು ನಮ್ಮ ಅಧಿಕಾರಿಗಳನ್ನು, ವೈದ್ಯರನ್ನು, ಮತ್ತು ಖರಗ್‌ಪುರದಿಂದ ಆಂಬ್ಯುಲೆನ್ಸ್ಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಪ್ರಕಾರ, ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸಂಜೆ 7 ಗಂಟೆ ಸುಮಾರಿಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿವೆ. ಇದಾದ ಬಳಿಕ ಯಶವಂತಪುರದಿಂದ ಹೌರಾಕ್ಕೆ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಇನ್ನು ಅಪಘಾತಕ್ಕೀಡಾದ ಸ್ಥಳದಲ್ಲಿ ನಿನ್ನೆಯಿಂದಲು ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಗಾಯಗೊಂಡ ಕೆಲ ಪ್ರಯಾಣಿಕರನ್ನು ಒಡಿಶಾದ ಬಾಲಸೋರ್‌ನಲ್ಲಿರುವ ಫಕೀರ್ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಬಾಲಸೋರ್‌ನ ಫಕೀರ್ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗಾಯಾಳುಗಳೊಂದಿಗೆ ಸಂವಾದ ನಡೆಸಿದ್ದಾರೆ.