ಭುವನೇಶ್ವರ್(ಒಡಿಶಾ): ಯೂನಿವರ್ಸಲ್ ಹೆಲ್ತ್ ಕವರೇಜ್ ಡೇ 2022 ಅಭಿಯಾನದ ಸಂದರ್ಭದಲ್ಲಿಅತಿ ಹೆಚ್ಚು ಸಂಖ್ಯೆಯ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ಸ್ ಐಡಿಗಳನ್ನು ರಚಿಸುವ ಮೂಲಕ ಒಡಿಶಾ ರಾಜ್ಯವು ಪ್ರಥಮ ಬಹುಮಾನ ಪಡೆದುಕೊಂಡಿದೆ ಎಂದು ರಾಜ್ಯ ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಎಬಿಹೆಚ್‌ಎ- ಆಬಾ) ಆರೋಗ್ಯ ಐಡಿ ಕಾರ್ಡ್ ನೀಡಲಾಗುತ್ತಿದೆ. ಇದು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಅಕೌಂಟ್. ಈ ಮೂಲಕ ಪ್ರತಿಯೊಬ್ಬರಿಗೂ 14 ಡಿಜಿಟ್‌ನ ಯೂನಿಕ್ ನಂಬರ್ ಹೊಂದಿರುವ ಕಾರ್ಡ್ ನೀಡಲಾಗುತ್ತದೆ. ಭಾರತದಾದ್ಯಂತ ಸೂಕ್ತವಾದ ಮತ್ತು ಸಮಯೋಚಿತ ಚಿಕಿತ್ಸೆ ಪಡೆಯಲು ಇದು ಸಹಕಾರಿ. ವ್ಯಕ್ತಿಗಳ ಆರೋಗ್ಯ ದಾಖಲೆ (ದತ್ತಾಂಶ)ಯನ್ನು ಆರೋಗ್ಯ ವೃತ್ತಿಪರರು, ವೈದ್ಯರು ನೋಡಲು ಇಲ್ಲವೇ ಪರಿಶೀಲಿಸಲು ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಒಡಿಶಾದ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಡಾ.ಬೃಂಧಾ ಡಿ ಅವರು ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ವಾರಣಾಸಿಯಲ್ಲಿ ನಡೆದ ಸಾರ್ವತ್ರಿಕ ಆರೋಗ್ಯ ಕವಚ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು ಎಂದು ಶನಿವಾರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಏನಿದು ಆಯುಷ್ಮಾನ್ ಭಾರತ್ ಯೋಜನೆ? ; ಅರ್ಹರು ಯಾರು?
ಎನ್ಸಿಡಿ ಪೋರ್ಟಲ್, ಆರ್ಸಿಹೆಚ್ ಪೋರ್ಟಲ್, ಇ-ಸಂಜೀವನಿ, ಪಿಎಂಎನ್ಡಿಪಿ ಮತ್ತು ನಿಕ್ಷಯ್ ಪೋರ್ಟಲ್ (ಎನ್ಟಿಇಪಿ) ನಂತಹ ವಿಭಿನ್ನ ಪೋರ್ಟಲ್‌ಗಳನ್ನು ಬಳಸಿಕೊಂಡು ಒಡಿಶಾ 43,61,895 ಸಂಖ್ಯೆಯ ಆಬಾ ಐಡಿಗಳನ್ನು ರಚಿಸಿದೆ. ಇಂಟರ್ನ್ಯಾಷನಲ್ ಯೂನಿವರ್ಸಲ್ ಹೆಲ್ತ್ ಕವರೇಜ್ ಡೇ (UHC) ಅನ್ನು ಪ್ರತಿ ವರ್ಷ ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ.