ಭುವನೇಶ್ವರ(ಒಡಿಶಾ): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ದೇಶದ 2ನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದರು.
ಬಿಜು ಜನತಾ ದಳದ ಅಧ್ಯಕ್ಷರಾದ ಪಟ್ನಾಯಕ್ ಅವರು, ಒಡಿಶಾದ ಮುಖ್ಯಮಂತ್ರಿಯಾಗಿ ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. 2000 ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪಟ್ನಾಯಕ್ ಅವರು ರಾಜ್ಯದಲ್ಲಿ 23 ವರ್ಷ 4 ತಿಂಗಳು 17 ದಿನಗಳ ಕಾಲ ಆಡಳಿತ ನಡೆಸಿದ್ದಾರೆ.
ಜ್ಯೋತಿ ಬಸು ದಾಖಲೆ ಉಡೀಸ್: ಇದಕ್ಕೂ ಮೊದಲು ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿ ಕಮ್ಯುನಿಸ್ಟ್ ಪಕ್ಷದ ನಾಯಕ ದಿವಂಗತ ಜ್ಯೋತಿ ಬಸು ಅವರು 23 ವರ್ಷ 138 ದಿನಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಅವರ ಈ ದಾಖಲೆಯನ್ನು ನವೀನ್ ಪಟ್ನಾಯಕ್ ಅವರು ಮುರಿದರು.
ಗಮನಾರ್ಹವೆಂದರೆ, ಸಿಕ್ಕೀಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರು ಡಿಸೆಂಬರ್ 12, 1994 ರಿಂದ ಮೇ 27, 2019 ರವರೆಗೆ ಸಿಎಂ ಆಗಿ ಸರಿಸುಮಾರು 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ಮೊದಲಿಗರಾಗಿದ್ದಾರೆ.
ಪಟ್ನಾಯಕ್ ರಾಜಕೀಯ ಪಯಣ: ತಂದೆ ಬಿಜು ಪಟ್ನಾಯಕ್ ಅವರ ನಿಧನದ ನಂತರ 1997 ರಲ್ಲಿ ನವೀನ್ ಅವರು ರಾಜಕೀಯ ಪ್ರವೇಶಿಸಿದರು. ತಮ್ಮ ತಂದೆಯ ಹೆಸರಿನಲ್ಲಿ 'ಬಿಜು ಜನತಾ ದಳ'ವನ್ನು ಸ್ಥಾಪಿಸುವ ಮೂಲಕ ಮಾಜಿ ಸಿಎಂ ಉತ್ತರಾಧಿಕಾರಿಯಾಗಿ ಘೋಷಿಸಿಕೊಂಡರು. ಅವರು 1997 ರಿಂದ ಬಿಜು ಜನತಾ ದಳದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅಸ್ಕಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು, 1998 ರಿಂದ 2000 ರ ವರೆಗೆ ಉಕ್ಕು ಮತ್ತು ಗಣಿಗಳ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು.
2000 ನೇ ಇಸ್ವಿಯಲ್ಲಿ ಒಡಿಶಾದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಟ್ನಾಯಕ್ ಸರ್ಕಾರ ರಚಿಸಿದರು. 2000 ರ ಮಾರ್ಚ್ 5 ರಿಂದ ಇಲ್ಲಿಯವರೆಗೆ ಸತತ 5 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. 2024 ರ ಚುನಾವಣೆಯಲ್ಲಿ ಬಿಜೆಡಿ ಗೆದ್ದು ಸರ್ಕಾರ ರಚಿಸಿದರೆ, ಅವರು ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಪಟ್ನಾಯಕ್ರ ಸೌಮ್ಯ ನಡವಳಿಕೆ, ಭ್ರಷ್ಟಾಚಾರದ ವಿರುದ್ಧದ ನಿಲುವು ಮತ್ತು ಬಡವರ ಪರವಾದ ನೀತಿಗಳು ರಾಜ್ಯದಲ್ಲಿ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಹೀಗಾಗಿ ಅವರ ಪಕ್ಷ ಸತತ ಐದು ಅವಧಿಗಳಲ್ಲಿ ಅಧಿಕಾರಕ್ಕೆ ಬಂದಿದೆ. ತಂದೆಯಂತೆಯೇ ಅಧಿಕಾರಶಾಹಿಯನ್ನು ಹಿಡಿತದಲ್ಲಿಟ್ಟುಕೊಂಡು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಮತದಾನಕ್ಕೂ ಮೊದಲೇ ಸಭಾತ್ಯಾಗ ಮಾಡಿದ ವಿಪಕ್ಷಗಳ ಸದಸ್ಯರು.. ಛತ್ತೀಸ್ಗಢ ಸಿಎಂ ವಿರುದ್ಧದ 'ಅವಿಶ್ವಾಸ'ಕ್ಕೆ ಸೋಲು