ಅಹಮದಾಬಾದ್ (ಗುಜರಾತ್): ಗುಜರಾತ್ನಲ್ಲಿ ಡ್ರಗ್ಸ್ ದಂಧೆಯ ಕರಾಳ ಮುಖ ಹೊರಬಿದ್ದಿದೆ. ಅಹಮದಾಬಾದ್ನಲ್ಲಿ ಕಳೆದ ಐದು ತಿಂಗಳಲ್ಲಿ ಈ ಡ್ರಗ್ ದಂಧೆಯಲ್ಲಿ ತೊಡಗಿದ್ದ ಎಂಟು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಅಚ್ಚರಿ ಎಂದರೆ ಯುವಕರಲ್ಲಿ ಡ್ರಗ್ಸ್ ದಂಧೆ ಹೆಚ್ಚಿಸಲು ಈ ಮಹಿಳೆಯರು ತಮ್ಮ ದೇಹವನ್ನೂ ಮಾರಿಕೊಳ್ಳುತ್ತಿದ್ದರು.
ಗುಜರಾತ್ ಮತ್ತು ಅದರಲ್ಲೂ ಅಹಮದಾಬಾದ್ ನಗರದಲ್ಲಿ ಮಾದಕ ವ್ಯಸನದ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವಕರನ್ನು ಅಡ್ಡದಾರಿಗೆ ಎಳೆಯುವ ದಂಧೆಯಲ್ಲಿ ತೊಡಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದುವರೆಗೂ ಈ ದಂಧೆಯಲ್ಲಿ ಪುರುಷರ ಕೈವಾಡ ಬಯಲಿಗೆ ಬರುತ್ತಿತ್ತು. ಆದರೆ, ಈಗ ಈ ಡ್ರಗ್ಸ್ ದಂಧೆಯಲ್ಲಿ ಮಹಿಳೆಯರ ಪ್ರಾಬಲ್ಯವೂ ಎದ್ದು ಕಾಣುತ್ತಿದೆ.
ಮಹಿಳಾ ಡ್ರಗ್ಸ್ ಪೆಡ್ಲರ್ಗಳು: ಕಳೆದ ಕೆಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವಾರು ಮಹಿಳಾ ಡ್ರಗ್ ಪೆಡ್ಲರ್ಗಳು ಅಥವಾ ಡ್ರಗ್ ಪೂರೈಕೆದಾರರನ್ನು ಪತ್ತೆ ಹೆಚ್ಚಿದ್ದಾರೆ. ಮಾದಕ ವ್ಯಸನ ನಿರ್ಮೂಲನೆಗೆ ಶ್ರಮಿಸುತ್ತಿರುವ ನಗರದ ಎಸ್ಒಜಿ (ಸ್ಪೆಷಲ್ ಆಪರೇಷನ್ ಗ್ರೂಪ್) ಅಪರಾಧ ತಂಡವು ಕಳೆದ ಆರು ತಿಂಗಳಲ್ಲಿ ಒಟ್ಟಾರೆ ಎಂಟು ಮಹಿಳಾ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿಯೇ ಪ್ರತಿ ತಿಂಗಳು ಒಬ್ಬರಲ್ಲ, ಒಬ್ಬರು ಮಹಿಳಾ ಡ್ರಗ್ಸ್ ದಂಧೆಕೋರರು ಸಿಕ್ಕಿಬೀಳುತ್ತಿದ್ದಾರೆ ಎಂದೇ ಹೇಳಬಹುದು.
- ಘಟನೆ -1 ಮೊದಲನೆಯದಾಗಿ 2022ರ ಜುಲೈ 21ರಂದು ಎಸ್ಒಜಿ ಅಪರಾಧ ತಂಡವು ಅಹಮದಾಬಾದ್ನ ಎಸ್ಜಿ ಹೆದ್ದಾರಿಯಿಂದ ಚಂದ್ಖೇಡಾದ ಹರ್ಪ್ರೀತ್ ಕೌರ್ ಸಹೋಟಾ ಎಂಬ 32 ವರ್ಷದ ಯುವತಿಯನ್ನು ಬಂಧಿಸಿತ್ತು. ಈ ವೇಳೆ ಡ್ರಗ್ಸ್ ಮತ್ತು 7.56 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಜಪ್ತಿ ಮಾಡಲಾಗಿತ್ತು. ಯುವತಿ ಸ್ವತಃ ಮಾದಕ ವ್ಯಸನಿಯಾಗಿದ್ದಳು.
- ಘಟನೆ -2 ಇದರ ಮರು ದಿನ ಎಂದರೆ ಜುಲೈ 22ರಂದು ಅಹಮದಾಬಾದ್ ನಗರದ ಘಂಟಾಕರ್ಣ ಮಾರುಕಟ್ಟೆಯ ಸಮೀಪದ ದೇವಸ್ಥಾನದಲ್ಲಿ ಮೂವರು ಮಹಿಳೆಯರಿಗೆ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ 39 ಕೆಜಿ, 600 ಗ್ರಾಂ ಗಾಂಜಾ, ಲಕ್ಷಾಂತರ ನಗದು, ಒಂದು ರಿಕ್ಷಾ, 7 ಮೊಬೈಲ್ ಫೋನ್ ಪತ್ತೆಯಾಗಿತ್ತು. ಬಂಧಿತರಲ್ಲಿ ಮಹಿಳೆಯರಲ್ಲಿ ಒಬ್ಬಳು ತಮಿಳುನಾಡಿನ ನಿವಾಸಿಯಾಗಿದ್ದು, ಇಬ್ಬರು ಮುಂಬೈನ ನಿವಾಸಿಗಳಾಗಿದ್ದಾರೆ. ಈ ಮೂವರು ಸಹ ಮಾದಕ ವಸ್ತು ವ್ಯಾಪಾರಕ್ಕಾಗಿಯೇ ಅಹಮದಾಬಾದ್ಗೆ ಬಂದಿದ್ದರು.
- ಘಟನೆ -3 ಆಗಸ್ಟ್ 23ರಂದು ನಗರ ಎಸ್ಒಜಿ ಕ್ರೈಂ ತಂಡವು ಅಹಮದಾಬಾದ್ನ ಅತಿದೊಡ್ಡ ಡ್ರಗ್ಸ್ ಡೀಲರ್ ಅಮೀನಬಾ ಅಲಿಯಾಸ್ ಡಾನ್ ಎಂಬಾಕೆಯನ್ನು ವಾನಿಯಾ ಸ್ಟ್ರೀಟ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಆತನಿಂದ 3.13 ಲಕ್ಷ ಮೌಲ್ಯದ 31.310 ಗ್ರಾಂ ಎಂಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಡ್ರಗ್ಸ್ ದಂಧೆಯಲ್ಲಿ ಬಂದ ಹಣದಲ್ಲಿ ಆರೋಪಿ ನಿರ್ಮಿಸಿದ್ದ ಎನ್ನಲಾದ ಮನೆಯನ್ನೂ ಪೊಲೀಸರು ಕೆಡವಿ ಬಿಸಿ ಮುಟ್ಟಿಸಿದ್ದಾರೆ.
- ಘಟನೆ -4 ನವೆಂಬರ್ 22ರಂದು ಇದೇ ನಗರ ಎಸ್ಒಜಿ ಕ್ರೈಂ ತಂಡವು 25 ತೆರೆದ ಬಾಟಲಿಗಳ ಅಕ್ರಮ ಕೆಮ್ಮು ಸಿರಪ್ ಸಮೇತ ಡ್ಯಾನಿಲಿಮ್ಡಾ ಪ್ರದೇಶದಲ್ಲಿ ನಾಜಿಯಾ ರಹೀಶ್ ಹುಸೇನ್ ಶೇಖ್ಎಂಬುವವರನ್ನು ಬಂಧಿಸಿತ್ತು. ಆರೋಪಿ ಮಹಿಳೆ ತನ್ನ ಮನೆಯ ಹೊರಗೆ ಅಂಗಡಿ ಇಟ್ಟುಕೊಂಡು ಕೆಮ್ಮಿನ ಸಿರಪ್ ಮಾರಾಟದ ಹೆಸರಲ್ಲಿ ಈ ದಂಧೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
- ಘಟನೆ -5 ಇದಾದ ಎರಡು ದಿನದಲ್ಲಿ ಎಂದರೆ ನವೆಂಬರ್ 24ರಂದು ಮುಂಬೈ ಮೂಲದ 33 ವರ್ಷದ ರಹ್ನುಮಾ ಅಲಿಯಾಸ್ ಸಿಜಾ ಅಸೀಮ್ಖಾನ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಈಕೆಯಿಂದ ಸುಮಾರು 3 ಲಕ್ಷ ಮೌಲ್ಯದ 29.680 ಗ್ರಾಂ ಎಂಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಬಂಧಿತ ಮಹಿಳೆಯು ಮುಂಬೈನಿಂದ ಅಹಮದಾಬಾದ್ಗೆ ಬಂದು ವಿವಿಧ ವ್ಯಾಪಾರಿಗಳಿಗೆ ಹಲವು ವರ್ಷಗಳಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದಳು ಎಂಬ ಅಂಶವೂ ಬಹಿರಂಗವಾಗಿದೆ.
- ಘಟನೆ -6 ನವೆಂಬರ್ 28ರಂದು ಅಹಮದಾಬಾದ್ನ ಕುಬೇರನಗರದಲ್ಲಿ 27 ವರ್ಷದ ಅಫ್ಸಾನ್ಬಾನು ಶೇಖ್ ಎಂಬ ಯುವತಿಯನ್ನು ನಗರ ಎಸ್ಒಜಿ ಕ್ರೈಂ ತಂಡ ಬಂಧಿಸಿತು. ಈಕೆಯಿಂದಲೂ 1.41 ಲಕ್ಷ ಸಾವಿರ ಮೌಲ್ಯದ 14.120 ಗ್ರಾಂ ಎಂಡಿ ಡ್ರಗ್ಸ್, ಮೊಬೈಲ್ ಫೋನ್, ನಗದು ಸೇರಿದ 1.65 ಲಕ್ಷದ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೇ, ವಿಚಾರಣೆಯಲ್ಲಿ ತಾನು ಟ್ರಕ್ವೊಂದರಲ್ಲಿ ಬಹಳ ದಿನಗಳಿಂದ ಈ ವ್ಯವಹರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಳು.
- ಘಟನೆ -7 ಡಿಸೆಂಬರ್ 23ರಂದು ನಗರ ಎಸ್ಒಜಿ ಕ್ರೈಂ ತಂಡವು ಜುಹಾಪುರ ಪ್ರದೇಶದಿಂದ 3.56 ಲಕ್ಷ ಮೌಲ್ಯದ 34.900 ಗ್ರಾಂ ಎಂಡಿ ಡ್ರಗ್ಸ್ನೊಂದಿಗೆ ಪರ್ವೀನ್ ಬಾನು ಬಲೋಚ್ ಎಂಬ ಯುವತಿಯನ್ನು ಬಂಧಿಸಿತು. ಈಕೆ ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಯುವತಿಯರು ಡ್ರಗ್ಸ್ ಪೆಡ್ಲರ್ಗಳು ಆಗುವುದು ಹೇಗೆ?: ಡ್ರಗ್ಸ್ ದಂಧೆಕೋರರು ತಮ್ಮ ದಂಧೆಗಾಗಿ ಮೊದಲು ಆಯ್ಕೆ ಮಾಡಿಕೊಳ್ಳುವುದೇ ದೇಶದ ಹೆಸರಾಂತ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು. ಇಲ್ಲಿನ ಯುವಕರಿಗೆ ಡ್ರಗ್ಸ್ ಪೂರೈಕೆ ಮಾಡುವ ಮೂಲಕ ದಂಧೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅದರಲ್ಲೂ ಮೊದಲು ಹೆಣ್ಣು ಮಕ್ಕಳಿಗೆ ಡ್ರಗ್ಸ್ ನೀಡಿ, ನಂತರ ಅವರಲ್ಲಿ ಡ್ರಗ್ಸ್ ದಂಧೆಯನ್ನು ಉತ್ತೇಜಿಸಲಾಗುತ್ತದೆ. ಇದರಿಂದಾಗಿ ಯುವತಿಯರು ಕ್ರಮೇಣ ಡ್ರಗ್ಸ್ ಪೆಡ್ಲರ್ಗಳು ಅಥವಾ ಪೂರೈಕೆದಾರರಾಗುತ್ತಾರೆ. ಇದರಲ್ಲಿ ಅನೇಕ ಬಾರಿ ಹುಡುಗಿಯರು ತಮ್ಮ ದೇಹವನ್ನು ಈ ಅಮಲಿಗಾಗಿ ಅರ್ಪಿಸುತ್ತಾರೆ. ಯುವಕರಲ್ಲಿ ಡ್ರಗ್ಸ್ ದಂಧೆ ಹೆಚ್ಚಿಸಲು ತಮ್ಮ ದೇಹವನ್ನೂ ಮಾರಿಕೊಳ್ಳಲು ಸಿದ್ಧರಾಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಈಟಿವಿ ಭಾರತನೊಂದಿಗೆ ಅಹಮದಾಬಾದ್ ನಗರದ ಸ್ಪೆಷಲ್ ಆಪರೇಷನ್ ಗ್ರೂಪ್ನ ಡಿಸಿಪಿ ಜೈರಾಜ್ಸಿಂಗ್ ವಾಲಾ ಮಾತನಾಡಿ, ಮಾದಕ ವಸ್ತು ದಂಧೆಗೆ ಮಹಿಳೆಯರೂ ಬಲಿಯಾಗುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ಮಹಿಳೆಯರು ಮುಂಬೈ ಸಂಪರ್ಕ ಹೊಂದಿರುವುದು ಸಹ ಪತ್ತೆಯಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಎಸ್ಒಜಿ ಕಾರ್ಯಾಚರಣೆ ತೀವ್ರಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬರ್ತ್ಡೇ ಆಚರಿಸಿಕೊಳ್ಳಲು ಬಂದ ಯುವಕ ಮಹಡಿಯಿಂದ ಬಿದ್ದು ಗಂಭೀರ ಗಾಯ