ಮುಂಬೈ/ ನವದೆಹಲಿ: ಮುಂಬೈನಲ್ಲಿ ಟಾಟಾ ನೆಕ್ಸಾನ್ ಕಂಪನಿಯ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ವರದಿಯಾಗಿದೆ. ಎಲೆಕ್ಟ್ರಿಕ್ ಕಾರಿನ ವಿಷಯದಲ್ಲಿ ಇದೇ ಪ್ರಥಮ ಬಾರಿಗೆ ಇಂಥ ಘಟನೆ ನಡೆದಿದೆ ಎನ್ನಲಾಗಿದೆ. ಟಾಟಾ ಮೋಟರ್ಸ್ ಕಂಪನಿಯು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.
ಮುಂಬೈನ ವಸೈ ಪಶ್ಚಿಮ (ಪಂಚವಟಿ ಹೋಟೆಲ್ ಬಳಿ) ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಟಾಟಾ ನೆಕ್ಸಾನ್ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕಂಪನಿಯ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ನಮ್ಮ ವಾಹನಗಳು ಹಾಗೂ ನಮ್ಮ ಗ್ರಾಹಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ನೆಕ್ಸಾನ್ ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರ್ ಆಗಿದೆ. ಪ್ರತಿ ತಿಂಗಳು 2,500 ರಿಂದ 3,000 ಕಾರುಗಳು ದೇಶದಲ್ಲಿ ಮಾರಾಟವಾಗುತ್ತವೆ. ಈವರೆಗೆ ಕಂಪನಿಯು 30000 ನೆಕ್ಸಾನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ.
ವಿಡಿಯೋ ಪ್ರಕಾರ, ಕಾರಿನ ಮಾಲೀಕರು ತಮ್ಮ ಆಫೀಸಿನಲ್ಲಿ ನಾರ್ಮಲ್ ಸ್ಲೋ ಚಾರ್ಜರ್ನಿಂದಲೇ ಕಾರು ಚಾರ್ಜಿಂಗ್ ಹಾಕಿರುವುದು ಕಾಣಿಸುತ್ತದೆ. ನಂತರ 5 ಕಿಮೀ ವಾಹನ ಚಲಾಯಿಸಿದ ನಂತರ ಡ್ಯಾಶ್ ಬೋರ್ಡ್ನಲ್ಲಿ ಬೆಂಕಿ ಕಾಣಿಸಿದೆ. ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತವೆ.
ಇದನ್ನು ಓದಿ:ಸ್ಪೈಸ್ಜೆಟ್ ರೆಕ್ಕೆಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶಿಸಿದ ವಿಮಾನ, 185 ಪ್ರಯಾಣಿಕರು ಸೇಫ್