ನವದೆಹಲಿ: ದೇಶದಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಬಯಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 4,037.87 ಕೋಟಿ ರೂ.ಗೆ ವಂಚಿಸಿದ ಆರೋಪದ ಮೇಲೆ ಕೋಲ್ಕತ್ತಾ ಮೂಲದ ಖಾಸಗಿ ಕಂಪನಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ಲೀಡ್ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಕೋಲ್ಕತ್ತಾದ ಕಾರ್ಪೊರೇಟ್ ಪವರ್ ಲಿಮಿಟೆಡ್‌ನ ಖಾತೆಯನ್ನು 2013ರ ಸೆಪ್ಟೆಂಬರ್ 30ರಂದು ಕಾರ್ಯ ನಿರ್ವಹಿಸದ ಸ್ವತ್ತು (ಎನ್ಪಿಎ) ಎಂದು ಘೋಷಿಸಿತ್ತು. ನಂತರ ಇತರ ಸದಸ್ಯ ಒಕ್ಕೂಟ ಬ್ಯಾಂಕ್‌ಗಳು ಸಹ ಈ ಖಾತೆಯನ್ನು ಎನ್ಪಿಎ ಎಂದು ಘೋಷಿಸಿದ್ದವು. ಇದಾದ ಬಳಿಕ 2019ರ ಅಕ್ಟೋಬರ್ 25ರಂದು ಕಂಪನಿಯ ಖಾತೆಗಳನ್ನು ವಂಚನೆ ಎಂದು ಪ್ರಕಟಿಸಲಾಗಿತ್ತು.
2009 ಮತ್ತು 2013ರ ನಡುವೆ ಈ ಕಂಪನಿಯು ಮ್ಯಾನಿಪುಲೇಟೆಡ್ ಯೋಜನಾ ವೆಚ್ಚದ ಹೇಳಿಕೆ ಸಲ್ಲಿಸಿ, ಬ್ಯಾಂಕ್ ಹಣವನ್ನು ಸಹ ಬೇರೆಡೆಗೆ ತಿರುಗಿಸಿತ್ತು. ಅಲ್ಲಿಂದ ಇದಕ್ಕೆ ಸಂಬಂಧಿಸಿದ ವಹಿವಾಟುಗಳು ಮತ್ತು ಹಣವನ್ನು ಒಳಗೊಂಡಂತೆ ವ್ಯಾಪಾರ ಸ್ವೀಕೃತಿಗಳನ್ನು ನಕಲಿ ಖಾತೆಗಳಾಗಿರುವ ವಿವಿಧ ಕಂಪನಿಗಳಿಗೆ ವರ್ಗಾವಹಿಸಲಾಗಿತ್ತು. ಅದರ ಪ್ರಕಾರ ಸಾಲದ ಪಡೆದ ಕಂಪನಿಯು ಹಣವನ್ನು ದುರುದ್ದೇಶಕ್ಕೆ ಬಳಕೆ ಮಾಡಿಕೊಂಡು ವಂಚಿಸಿದೆ ಎಂದು ಸಿಬಿಐ ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ನಾಗ್ಪುರ, ಮುಂಬೈ, ರಾಂಚಿ, ಕೋಲ್ಕತ್ತಾ, ದುರ್ಗಾಪುರ, ಗಾಜಿಯಾಬಾದ್, ವಿಶಾಖಪಟ್ಟಣಂ ಸೇರಿದಂತೆ 16 ಸ್ಥಳಗಳಲ್ಲಿ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಕಲಿ ಬ್ಯಾಂಕ್ ಸೃಜಿಸಿ ಗ್ರಾಹಕರ 2 ಕೋಟಿಗೂ ಅಧಿಕ ಹಣ ನುಂಗಿದ ವಂಚಕರು