ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮಾಜಿ ಶಾಸಕ ಸುವೇಂದು ಅಧಿಕಾರಿ ಅವರು ಬಿಜೆಪಿ ಸೇರಿ ಒಂದು ತಿಂಗಳಾಗಿದೆ. ಇದೀಗ ಅವರ ತಂದೆ, ಸಂಸದ ಸಿಸಿರ್ ಅಧಿಕಾರಿ ಅವರನ್ನು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಟಿಎಂಸಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ.
ಸಿಸಿರ್ ಅವರ ಜಾಗಕ್ಕೆ ಅಧಿಕಾರಿ ಕುಟುಂಬದ ಕಟ್ಟಾ ವಿರೋಧಿಯಾದ ಹಿರಿಯ ಟಿಎಂಸಿ ನಾಯಕ ಸಚಿವ ಸೌಮೇನ್ ಮಹಾಪಾತ್ರ ಅವರನ್ನು ನಿಯೋಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಸಿರ್ ಅಧಿಕಾರಿ, ನಾನು ನನ್ನ ಜೀವನದುದ್ದಕ್ಕೂ ರಾಜಕೀಯದಲ್ಲಿ ಮುಂದುವರೆಯುತ್ತೇನೆ. ಹುದ್ದೆಯಿಂದ ತೆಗೆದುಹಾಕುವ ಮೂಲಕ ನಾನು ರಾಜಕೀಯವನ್ನು ತೊರೆಯುತ್ತೇನೆ ಎಂದು ಯಾರಾದರೂ ಭಾವಿಸಿದರೆ ಅದು ಅವರು ತಪ್ಪು ಕಲ್ಪನೆ. ನಿರಂತರವಾಗಿ ಜನ ಸೇವೆ ಮಾಡುವುದನ್ನು ಮುಂದುವರಿಸುತ್ತೇನೆ. ಈ ವಿಷಯದ ಕುರಿತು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚಿಸುವುದಾಗಿ ಇದೇ ವೇಳೆ ಅವರು ಹೇಳಿದರು.
ಇನ್ನು ನೀವು ಬಿಜೆಪಿ ಸೇರುತ್ತೀರಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಏನೂ ಅಸಾಧ್ಯವಲ್ಲ, ಮುಂದೆ ನೋಡೋಣ. ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮೊದಲು ಪಕ್ಷದ ಮುಖ್ಯಸ್ಥರೊಂದಿಗೆ ಚರ್ಚಿಸಿ, ನಂತರ ತೆಗೆದುಕೊಳ್ಳುತ್ತೇನೆ ಎಂದು ಬಿಜೆಪಿ ಸೇರುವ ಕುರಿತು ಪರೋಕ್ಷವಾಗಿ ಸುಳಿವು ನೀಡಿದರು.