ಮುಂಬೈ (ಮಹಾರಾಷ್ಟ್ರ): ಉತ್ತರಪ್ರದೇಶದಲ್ಲಿ ಫಿಲ್ಮಸಿಟಿ ನಿರ್ಮಾಣ ಮಾಡುವ ಬಗ್ಗೆ ಬಾಲಿವುಡ್ ನಟರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತಿಗೆ ಯುಪಿ ಸಿಎಂ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ.
ನಟ ಅಕ್ಷಯ್ ಕುಮಾರ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ಮುಂಬೈನ ಚಲನಚಿತ್ರ ನಗರವನ್ನು ಬೇರೆಡೆ ಸ್ಥಳಾಂತರಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಅಕ್ಷಯ್ ಕುಮಾರ್ ಅವರೊಂದಿಗೆ ಯೋಗಿ ಪಂಚತಾರಾ ಹೋಟೆಲ್ನಲ್ಲಿ ಕುಳಿತು ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಆದರೆ, ಅದು ಎಂದೂ ಈಡೇರದ ಮಾತುಕತೆ. ಮುಂಬೈನ ಚಲನಚಿತ್ರ ನಗರವನ್ನು ಬೇರೆಡೆ ಸ್ಥಳಾಂತರಿಸುವುದು ಅಷ್ಟು ಸುಲಭವಲ್ಲ.
ಇದಕ್ಕೆ ಸುದೀರ್ಘ ಇತಿಹಾಸವಿದೆ. ಹಲವು ವರ್ಷಗಳಿಂದ ಸಾಕಷ್ಟು ಶ್ರಮಪಟ್ಟು ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮವೂ ದೊಡ್ಡದಾಗಿದೆ. ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲೂ ಚಲನಚಿತ್ರ ನಗರಗಳಿವೆ.
ಯೋಗಿ ಕೂಡ ಈ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ನಿರ್ದೇಶಕರು/ಕಲಾವಿದರೊಂದಿಗೆ ಮಾತನಾಡುತ್ತಾರೆಯೇ ಅಥವಾ ಅವರು ಮುಂಬೈನಲ್ಲಿ ಮಾತ್ರ ಹಾಗೆ ಮಾಡಲು ಬರುತ್ತಾರೆಯೇ ? ಎಂದು ರಾವತ್ ಪ್ರಶ್ನಿಸಿದ್ದಾರೆ.
ಅಲ್ಲದೇ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಯೋಜನೆ ದೇಶದಲ್ಲಿ ಬರುತ್ತಿದ್ದರೆ, ಅದಕ್ಕಾಗಿ ನನ್ನ ಶುಭಾಶಯಗಳು ಎಂದೂ ಅವರು ತಿಳಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿರುವ ಬಗ್ಗೆ ಅವರೊಂದಿಗಿನ ಫೋಟೋಗಳನ್ನು ಸಿಎಂ ಯೋಗಿ ಆದಿತ್ಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭೇಟಿ ವೇಳೆ ಉತ್ತರಪ್ರದೇಶದಲ್ಲಿ ಫಿಲ್ಮಸಿಟಿ ನಿರ್ಮಾಣ ಕುರಿತು ಹಲವು ಬಾಲಿವುಡ್ ನಟರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ರಾವತ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.