ಫಿರೋಜ್ಬಾದ್: ಕೋವಿಡ್ ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೊಳಿಸುತ್ತಿದ್ದು, ಫಿರೋಜಾಬಾದ್ ಜಿಲ್ಲಾಡಳಿತವು ಸರ್ಕಾರಿ ನೌಕರರಿಗೆ ಲಸಿಕೆ ಪಡೆದವರಿಗೆ ಮಾತ್ರ ಸಂಬಳ ಎಂದು ಆದೇಶಿಸಿದೆ.
ಮುಖ್ಯ ಅಭಿವೃದ್ಧಿ ಅಧಿಕಾರಿ ಚರ್ಚಿತ್ ಗೌರ್ ಈ ಬಗ್ಗೆ ಪ್ರತಿಕ್ರಿಯಿಸಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಅವರು "ನೋ ವ್ಯಾಕ್ಸಿನೇಷನ್ ನೋ ಸ್ಯಾಲರಿ" ಎಂಬ ಮೌಖಿಕ ಆದೇಶವನ್ನು ಹೊರಡಿಸಿದ್ದಾರೆ. ಆದೇಶದ ಅನ್ವಯ ಕೊರೊನಾ ವ್ಯಾಕ್ಸಿನ್ ಪಡೆಯದ ಸರ್ಕಾರಿ ನೌಕರರಿಗೆ ಮೇ ತಿಂಗಳ ವೇತನವನ್ನು ನೀಡಲಾಗುವುದಿಲ್ಲ ಎಂದು ಗೌರ್ ತಿಳಿಸಿದ್ದಾರೆ.
ಜಿಲ್ಲಾ ಖಜಾನೆ ಅಧಿಕಾರಿ ಮತ್ತು ಇತರ ಇಲಾಖಾ ಮುಖ್ಯಸ್ಥರಿಗೆ ಈ ಆದೇಶವನ್ನು ಜಾರಿಗೆ ತರಲು ನಿರ್ದೇಶನ ನೀಡಲಾಗಿದ್ದು, ನೌಕರರ ಪಟ್ಟಿಯನ್ನು ತಯಾರಿಸಿ ಲಸಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವೆಡೆ ಕೊರೊನಾ ಲಸಿಕೆ ಪಡೆಯಲು ಜನ ಹಿಂಜರಿಯುತ್ತಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಲಸಿಕೆ ತೆಗದುಕೊಳ್ಳದವರಿಗೆ ಸಂಬಳವಿಲ್ಲ ಎಂದರೆ ಜನ ಖಂಡಿತ ಲಸಿಕೆ ತೆಗೆದುಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಯುಪಿ ಸರ್ಕಾರ ಈ ನಿಯಮ ಜಾರಿಗೊಳಿಸಿದೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ.