ಶ್ರೀನಗರ (ಜಮ್ಮುಕಾಶ್ಮೀರ): ಕಲ್ಲು ತೂರಾಟ ಹಾಗೂ ಇತರೆ ದೇಶ ವಿರೋಧಿ ಕೃತ್ಯಗಳಲ್ಲಿ ತೊಡುಗುವವರಿಗೆ ಪಾಸ್ಪೋರ್ಟ್, ಸರ್ಕಾರಿ ಉದ್ಯೋಗ ಹಾಗೂ ಇತರೆ ಭದ್ರತಾ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಕುರಿತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ), ಅಪರಾಧ ತನಿಖಾ ಇಲಾಖೆ (ಸಿಐಡಿ) ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಯಾವುದೇ ಸರ್ಕಾರಿ ಉದ್ಯೋಗ, ಪಾಸ್ಪೋರ್ಟ್ ಪಡೆಯಬೇಕೆಂದರೆ, ಜಮ್ಮುಕಾಶ್ಮೀರ ಪೊಲೀಸರ ಅನುಮತಿ ಕಡ್ಡಾಯವಾಗಿರುತ್ತದೆ. ವ್ಯಕ್ತಿಯು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಅವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುವುದಿಲ್ಲ. ದುಷ್ಕೃತ್ಯಗಳ ಬಗ್ಗೆ ಕೇವಲ ಪೊಲೀಸರಷ್ಟೇ ಅಲ್ಲದೆ, ಭದ್ರತಾ ಏಜೆನ್ಸಿ, ಭದ್ರತಾ ಪಡೆಗಳು ಸಾಕ್ಷ್ಯ ನೀಡಬಹುದು. ಸಿಸಿಟಿವಿ ದೃಶ್ಯಾವಳಿ, ವಿಡಿಯೋ, ಆಡಿಯೋ ಹಾಗೂ ಇನ್ನಿತರ ಡಿಜಿಟಲ್ ಪುರಾವೆಗಳಿದ್ದರೆ, ಅವುಗಳನ್ನು ಪೊಲೀಸರಿಗೆ ನೀಡಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಕಣಿವೆ ರಾಜ್ಯದಲ್ಲಿ, ಸಾವಿರಾರು ಜನರ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ. ಮೂಲಗಳ ಪ್ರಕಾರ ಬಾಕಿ ಇರುವ ಪರಿಶೀಲನೆ ಮತ್ತು ಭದ್ರತಾ ಅನುಮತಿಯ ಕಾರಣದಿಂದಾಗಿ ಸಾವಿರಾರು ಜನರಿಗೆ ಪಾಸ್ಪೋರ್ಟ್ ನಿರಾಕರಿಸಲಾಗಿದೆ.
ಇದನ್ನೂ ಓದಿ: ಧಮ್ತಾರಿ ಜಿಲ್ಲೆಯಲ್ಲಿ ಯುವಕನನ್ನು ಹತ್ಯೆಗೈದ ನಕ್ಸಲರು
ಈ ಹಿಂದೆ, 'ರಾಷ್ಟ್ರವಿರೋಧಿ' ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಹಲವರಿಗೆ ಭದ್ರತಾ ಅನುಮತಿಯನ್ನು ನಿರಾಕರಿಸಲಾಗಿತ್ತು. 1997 ರ ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವೆಗಳ ತಿದ್ದುಪಡಿ ಕಾಯ್ದೆಯಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಸಿಐಡಿ ವರದಿ ಕಡ್ಡಾಯವಾಗಿದೆ.