ನವದೆಹಲಿ: ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳು ಆ ದೇಶದಿಂದ ನಿರ್ಗಮಿಸಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಗಂಟೆಗಳ ಕಾಲ ರಸ್ತೆಯ ಬದಿಯೇ ಕಾದು ಕುಳಿತಿರುವ ವಿಡಿಯೋಗಳು ವೈರಲ್ ಆಗಿವೆ.
ನಾವು ಈ (ರೊಮೇನಿಯಾ) ಗಡಿಯಲ್ಲಿ 10 ಗಂಟೆಗಳ ಕಾಲ ಕಾಯುತ್ತಿದ್ದೇವೆ. ಯಾರೂ ನಮ್ಮನ್ನು ರಕ್ಷಿಸಲು ಬಂದಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಒಬ್ಬರಾದ ರಾಘವೇಂದ್ರ ಅವರು ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ.
ನಾವು ನಿನ್ನೆ ಮಧ್ಯಾಹ್ನ 2 ಗಂಟೆಗೆ ಹೊರಟೆವು, ಇಲ್ಲಿಯವರೆಗೆ, ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ನಿಮಗೆ ಸಹಾಯ ಮಾಡಲು ಅಧಿಕಾರಿಗಳು ಇದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರು ಎಲ್ಲಿದ್ದಾರೆ?. ರೊಮೇನಿಯಾ ಗಡಿಯಲ್ಲಿ ಯಾರೂ ಇಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಪುಲ್ಕಿತ್ ಶ್ರೀವಾಸ್ತವ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.
ನಮ್ಮನ್ನು ಇಲ್ಲಿಗೆ ಬರಲು ಹೇಳಲಾಯಿತು. ಅದರಂತೆ ನಾವು ನಿನ್ನೆ ಇಲ್ಲಿಗೆ ತಲುಪಿದ್ದೇವೆ. ಈಗ ಸಂಜೆ 7 ಗಂಟೆಯಾಗಿದೆ. ಸುಮಾರು 5,000 ವಿದ್ಯಾರ್ಥಿಗಳು ಇಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ನಮ್ಮ (ಭಾರತೀಯ) ರಾಯಭಾರ ಕಚೇರಿಯಿಂದ ಒಬ್ಬ ವ್ಯಕ್ತಿಯೂ ಇಲ್ಲ. ಯಾರೂ ನಮ್ಮ ಬಗ್ಗೆ ಕಾಳಜಿ ವಹಿಸುವುತ್ತಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದ್ದಾರೆ.
ಅವರು (ಗಡಿ ಗಸ್ತು) ಪ್ರತಿ ಐದು ನಿಮಿಷಗಳ ನಂತರ ಅಂತರದಲ್ಲಿ ಗೇಟ್‌ಗಳನ್ನು ತೆರೆಯುತ್ತಿದ್ದಾರೆ. ಆದರೆ, ಉಕ್ರೇನಿಯನ್ನರಿಗೆ ಮಾತ್ರ ದೇಶದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ಪ್ರಜೆಗಳನ್ನು ಉಕ್ರೇನ್‌ನಿಂದ ರೊಮೇನಿಯಾ ಮತ್ತು ಹಂಗೇರಿ ಮೂಲಕ ಸ್ಥಳಾಂತರಿಸಲಾಗುತ್ತಿದೆ. ನಮ್ಮ ನಾಗರಿಕರಿಗೆ ನೆರೆಯ ದೇಶಗಳೊಂದಿಗೆ ಹೆಚ್ಚಿನ ಗಡಿಗಳನ್ನು ತೆರೆಯಲು ನಾವು ನಿರಂತರವಾಗಿ ಅನ್ವೇಷಿಸುತ್ತಿದ್ದೇವೆ ಮತ್ತು ಕೆಲಸ ಮಾಡುತ್ತಿದ್ದೇವೆ" ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಗಡಿಯಲ್ಲಿ ಸಿಲುಕಿ ಸಂಕಟ ಅನುಭವಿಸುತ್ತಿದ್ದಾರೆ.
13,000 ಭಾರತೀಯ ವಿದ್ಯಾರ್ಥಿಗಳು ಇನ್ನೂ ಉಕ್ರೇನ್‌ನಲ್ಲಿ.. ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ 688 ಭಾರತೀಯ ಪ್ರಜೆಗಳು ಉಕ್ರೇನ್‌ನಿಂದ ಹಿಂತಿರುಗಿದ್ದು, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸಹ ಉಕ್ರೇನ್‌ನಲ್ಲಿ ಸುಮಾರು 13,000 ಭಾರತೀಯರು ಸಿಲುಕಿಕೊಂಡಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಅವರನ್ನು ಮರಳಿ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.