ಹೈದರಾಬಾದ್ : ಕೊರೊನಾ ಸೋಂಕಿನ ಆತಂಕ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮತ್ತೆ ಆರಂಭವಾಗಿದೆ. ಈ ಹಿನ್ನೆಲೆ ತೆಲಂಗಾಣ ಸರ್ಕಾರ ಇಂದಿನಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಚಿತ್ರಮಂದಿರಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಿನಿಮಾಟೋಗ್ರಫಿ ಖಾತೆ ಸಚಿವರಾದ ಟಿ.ಶ್ರೀನಿವಾಸ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಹಿನ್ನೆಲೆ ಚಿತ್ರಮಂದಿರಗಳನ್ನು ಮುಚ್ಚಲಾಗುತ್ತದೆ ಎಂದು ಕೆಲ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.
ಸರ್ಕಾರ ಈವರೆಗೆ ಚಿತ್ರಮಂದಿರಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶನ ಮಾಡಬಹುದಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 'ಸುಧಾಕರ್ ಹೇಳಿಕೆ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆ ಆಗಲಿ'
ಕೋವಿಡ್ನಿಂದಾಗಿ ಈಗಾಗಲೇ ಚಿತ್ರಮಂದಿರಗಳು, ಚಲನಚಿತ್ರೋದ್ಯಮದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಕಲಾವಿದರು ಆರ್ಥಿಕ ದುಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದಾಗಿ ಚಿತ್ರಮಂದಿರಗಳನ್ನು ಮುಚ್ಚುವ ಪ್ರಸ್ತಾಪವಿಲ್ಲ. ಜನರು ಗಾಳಿ ಸುದ್ದಿಯ ಬಗ್ಗೆ ಕಿವಿ ಕೊಡಬಾರದು ಎಂದಿದ್ದಾರೆ.
ನವೆಂಬರ್ 23ರಂದು ಕಂಟೇನ್ಮೆಂಟ್ ಝೋನ್ಗಳಿಂದ ಹೊರಗಿರುವ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಿಂದಿನ ತಿಂಗಳಷ್ಟೇ ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿತ್ತು.