ಪಾಲಕ್ಕಡ್(ಕೇರಳ): ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗಾಗಿ ಪಂಚಾಯತ್, ತಾಲೂಕು ಕಚೇರಿಗಳಿಗೆ ಭೇಟಿ ಕೊಟ್ಟು ಅಲ್ಲಿ ಅಧಿಕಾರಿಗಳನ್ನು ಸರ್ ಅಥವಾ ಮೇಡಂ ಅಂತ ಸಂಬೋಧಿಸುತ್ತಾರೆ. ಕೆಲವೆಡೆ ಸ್ವಾಮಿ, ಅಯ್ಯ ಎಂದು ಕರೆಯುವುದನ್ನೂ ನೋಡಿದ್ದೇವೆ. ಆದರೆ ಕೇರಳದ ಪಾಲಕ್ಕಡ್ ಜಿಲ್ಲೆಯ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದೀಗ ಕಚೇರಿಗೆ ಬರುವ ಜನರು ತಮ್ಮನ್ನು ಸರ್ ಅಥವಾ ಮೇಡಂ ಎಂದು ಕರೆಯದಂತೆ ಸೂಚಿಸಿದ್ದಾರೆ. ಇದರ ಬದಲಾಗಿ ತಮ್ಮ ಹೆಸರು ಅಥವಾ ಹುದ್ದೆಯ ಪದನಾಮದಿಂದ ಕರೆಯುವಂತೆ ಹೇಳಿದ್ದಾರೆ.
ಪಾಲಕ್ಕಡ್ ಜಿಲ್ಲೆಯ ಮಾಥೂರ್ ಗ್ರಾಮ ಪಂಚಾಯತ್ನ ಅಧಿಕಾರಿಗಳು ವಸಾಹತುಶಾಹಿ ಗೌರವಗಳಿಗೆ ಬ್ರೇಕ್ ಹಾಕಿದ್ದು, ಸಾಮಾನ್ಯ ಜನರು, ಜನಪ್ರತಿನಿಧಿಗಳು ತಮ್ಮ ಕಚೇರಿಗೆ ಬಂದಾಗ 'ಸರ್' ಅಥವಾ 'ಮೇಡಂ' ಎಂದು ಕರೆದು ಗೌರವ ನೀಡುವುದನ್ನು ನಿಷೇಧಿಸಿದ್ದಾರೆ. ಪರಸ್ಪರರ ನಡುವೆ ಪ್ರೀತಿ ಮತ್ತು ವಿಶ್ವಾಸದ ಬಾಂಧವ್ಯ ಬೆಸೆಯಲು ಹೀಗೆ ಮಾಡಿರುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸರ್ ಮತ್ತು ಮೇಡಂ ಎಂಬ ಪದಗಳನ್ನು ನಿಷೇಧಿಸಿದ ದೇಶದಲ್ಲೇ ಮೊದಲ ಪಂಚಾಯತ್ ಮಾಥೂರ್ ಎನ್ನಲಾಗ್ತಿದೆ.
ಇತ್ತೀಚೆಗೆ ನಡೆದ ಪಂಚಾಯತ್ ಕೌನ್ಸಿಲ್ ಸಭೆಯಲ್ಲಿ ಐತಿಹಾಸಿಕ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡು ಹೊಸ ನಿಯಮವನ್ನು ಜಾರಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. 16 ಸದಸ್ಯರ ಕಾಂಗ್ರೆಸ್ ಆಡಳಿತದ ಮಾಥೂರ್ ಪಂಚಾಯತ್ನಲ್ಲಿ 7 ಮಂದಿ ಸಿಬಿಐ(ಎಂ) ಹಾಗೂ ಒಬ್ಬ ಬಿಜೆಪಿ ಸದಸ್ಯರಿದ್ದಾರೆ. ಈ ಎಲ್ಲಾ ಸದಸ್ಯರು ಸರ್ ಹಾಗೂ ಮೇಡಂ ಪದಗಳನ್ನು ತೆಗೆಯುವ ನಿರ್ಣಯವನ್ನು ಕಳೆದ ವಾರ ಬೆಂಬಲಿಸಿದ್ದಾರೆ.
ಮಾಥೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಆರ್. ಪ್ರಸಾದ್, ಸಾಮಾನ್ಯ ಜನರು ಹಾಗೂ ಪಂಚಾಯತ್ ಅಧಿಕಾರಿಗಳ ನಡುವೆ ಇರುವ ಅಂತರವನ್ನು ಈ ನಿರ್ಣಯ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.