ಪಂಚಕುಲಾ(ಹರಿಯಾಣ): ಕೇವಲ ಪ್ರಧಾನಿ ಮೋದಿ ಅವರ ಹೆಸರು ಹೇಳಿಕೊಂಡು ಹರಿಯಾಣದಲ್ಲಿ ಬಿಜೆಪಿ ಮೂರನೇ ಅವಧಿಗೆ 45ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವೇ? ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದ್ದು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಹರಿಯಾಣದಲ್ಲಿ ಅಕ್ಟೋಬರ್ 30ರಂದು ಎಲ್ಲೆನಾಬಾದ್ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಇದಕ್ಕೂ ಮುಂಚಿತವಾಗಿ ಕೇಂದ್ರ ಸಚಿವರ ಈ ಹೇಳಿಕೆ ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ರಾಜ್ಯ ಖಾತೆ ಸಚಿವರಾಗಿರುವ ರಾವ್ ಇಂದ್ರಜಿತ್ ಸಿಂಗ್, ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಮೋದಿ ನೇತೃತ್ವದಲ್ಲಿ ರಾಜ್ಯದಲ್ಲಿ ಮೊದಲ ಸಲ ಬಿಜೆಪಿ 47 ಸ್ಥಾನದಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಿತ್ತು. ಎರಡನೇ ಸಲ 40 ಸ್ಥಾನಗಳಲ್ಲಿ ಗೆದ್ದಿದ್ದೇವೆ. ಆದರೆ, ಮೂರನೇ ಸಲ ಮೋದಿ ಜೀ ಹೆಸರು ಹೇಳಿಕೊಂಡು 45ರ ಗಡಿ ದಾಟಲು ಸಾಧ್ಯವೆ? ಹರಿಯಾಣದಲ್ಲಿ ಒಂದೇ ಪಕ್ಷ ಮೂರು ಅವಧಿಗೆ ಅಧಿಕಾರ ನಡೆಸಿರುವ ಇತಿಹಾಸವಿಲ್ಲ ಎಂದಿದ್ದಾರೆ.
ಮೋದಿ ಜೀ ನಮ್ಮೊಂದಿಗೆ ಹಾಗೂ ರಾಜ್ಯದೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ, ಈ ಬಾರಿ ನಾವು ಮೋದಿ ಹೆಸರಿನಲ್ಲಿ ಮತ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಪ್ರಮುಖ ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ನಾವು ಇಲ್ಲಿನ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಬೇಕು. ಆ ವೇಳೆ ಮಾತ್ರ ಮೂರನೇ ಸಲ ಗೆಲುವು ಸಾಧಿಸಲು ಸಾಧ್ಯ ಎಂದು ತಿಳಿಸಿದರು.