ನವದೆಹಲಿ: ಹೆಚ್ಚುವರಿ ಡೋಸ್ ಕೋವಿಡ್-19 ಲಸಿಕೆ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರತಿರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (NTAGI) ಸಭೆಯಲ್ಲಿ ಯಾವುದೇ ಅಂತಿಮ ಶಿಫಾರಸು ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪ್ರತಿರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಸುದೀರ್ಘ ಸಭೆ ನಡೆಸಿದೆ. ಸಭೆಯಲ್ಲಿ ಹೆಚ್ಚುವರಿ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಚರ್ಚಿಸಲಾಗಿದೆಯಾದರೂ, ಬೂಸ್ಟರ್ ಡೋಸ್ ಕುರಿತಂತೆ ಯಾವುದೇ ಪ್ರಸ್ತಾಪ ಇರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಎಎನ್‌ಐ ವರದಿ ಮಾಡಿದೆ.
ಸಭೆಯು ಕೋವಿಡ್-19 ಲಸಿಕೆ, ಹೆಚ್ಚುವರಿ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಬೆಳಕು ಚೆಲ್ಲಿದೆ. ಆದರೆ ಈ ಬಗ್ಗೆ ಒಮ್ಮತವಿಲ್ಲದ ಕಾರಣ ಅಂತಿಮ ಶಿಫಾರಸು ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಮಕ್ಕಳಿಗೆ ಬೂಸ್ಟರ್ ಡೋಸ್ ಮತ್ತು ವ್ಯಾಕ್ಸಿನೇಷನ್ ನೀಡುವ ಬಗ್ಗೆ ಎನ್‌ಟಿಎಜಿಐ ಸಮಗ್ರ ನೀತಿ ರೂಪಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಬೂಸ್ಟರ್ ಡೋಸ್ ಮತ್ತು ಹೆಚ್ಚುವರಿ ಡೋಸ್ ನಡುವೆ ವ್ಯತ್ಯಾಸವಿದೆ. ಪ್ರಾಥಮಿಕ ಎರಡು ಡೋಸ್ ನೀಡಿದ ನಂತರ ಪೂರ್ವನಿರ್ಧರಿತ ಅವಧಿಯ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಸಮಸ್ಯೆ ಹೊಂದಿರುವ ಜನರಿಗೆ ಹೆಚ್ಚುವರಿ ಡೋಸ್ ನೀಡಲಾಗುತ್ತದೆ ಎನ್ನಲಾಗಿತ್ತು.
ಎರಡು ಡೋಸ್‌ಗಳೊಂದಿಗೆ, ಪ್ರತಿರಕ್ಷಣಾ ಕಾರ್ಯವು ಸರಿಯಾಗಿ ಆಗದಿದ್ದರೆ ಲಸಿಕೆಯ ಹೆಚ್ಚುವರಿ ಡೋಸ್ ನೀಡಲಾಗುತ್ತದೆ. ದೇಶದಲ್ಲಿ ಈಗಾಗಲೇ ಒಮಿಕ್ರಾನ್ ರೂಪಾಂತರದ 23 ಹೊಸ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇತ್ತೀಚೆಗೆ ಲೋಕಸಭೆಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ(ಎನ್‌ಟಿಎಜಿಐ) ಮತ್ತು ರಾಷ್ಟ್ರೀಯ ತಜ್ಞರ ತಂಡವು (ಎನ್‌ಇಜಿವಿಎಸಿ) ಕೋವಿಡ್-19 ಲಸಿಕೆ ನೀಡಿಕೆಗೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಗಳ ಬಗ್ಗೆ ಚರ್ಚೆ ಮತ್ತು ಪರಿಶೀಲಿಸುತ್ತಿವೆ ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 130 ಮಕ್ಕಳಿಗೆ ಕೋವಿಡ್.. ಮೊದಲ ಸ್ಥಾನದಲ್ಲಿ ಕಾಫಿನಾಡು