ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕದ ಮೂರು ಅಲೆಗಳಿಂದ ತತ್ತರಿಸಿದ್ದ ಜನ ನಿಧಾನವಾಗಿ ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲಿ ದಿಢೀರನೆ ಮುಂಬೈಯಲ್ಲಿ ಹೊಸ ರೂಪಾಂತರಿ ಎಕ್ಸ್‌ಇ(XE) ವೈರಸ್ ಪತ್ತೆಯಾಗಿದೆ ಎಂಬ ಸುದ್ದಿ ಮತ್ತೆ ಜನರನ್ನು ಆತಂಕಕ್ಕೆ ದೂಡಿತ್ತು. ಇದೀಗ ಈ ರೂಪಾಂತರಿ ವೈರಸ್ ಪತ್ತೆಗೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
'XE' ರೂಪಾಂತರ ಎಂದು ಹೇಳಲಾದ ಮಾದರಿಯ FastQ ಫೈಲ್‌ಗಳನ್ನು ಐಎನ್ಎಸ್ಎಸಿಒಜಿ (ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ವಿಶ್ಲೇಷಿಸಿದೆ. ಇದು ಈ ರೂಪಾಂತರಿ ವೈರಸ್ನ ಜೀನೋಮ್ ರಚನೆಗೂ ಕೊರೊನಾ ವೈರಸ್ ರಚನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಎಕ್ಸ್‌ಇ ಸೋಂಕು ಒಮಿಕ್ರಾನ್ ರೂಪಾಂತರದ ಎರಡು ತಳಿಗಳ ವಿಭಜನೆಯಿಂದ ಉಂಟಾಗಿದೆ. BA.1 ಮತ್ತು BA.2 ತಳಿಗಳ ಮೂಲಕ ಇದು 'ಪುನಃಸಂಯೋಜಕ'(recombinant) ಆಗಿದೆ. ಇತರ ಕೋವಿಡ್ ರೂಪಾಂತರಗಳಿಗಿಂತ ಕನಿಷ್ಠ ಶೇ.10ರಷ್ಟು ಹೆಚ್ಚು ಹರಡುತ್ತದೆ. ಅಲ್ಲದೇ, ಒಂದು ಕಪ್ಪಾ ರೂಪಾಂತರಿ ಪ್ರಕರಣವೂ ಪತ್ತೆಯಾಗಿದೆ ಎಂದು ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು.
376 ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲಾಗಿತ್ತು. ಮುಂಬೈನ 230 ಮಾದರಿಗಳಲ್ಲಿ 228 ಮಾದರಿಗಳು ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ. ಇದರಲ್ಲಿ ಒಂದು ರೂಪಾಂತರಿ ಎಕ್ಸ್‌ಇ ಹಾಗೂ ಮತ್ತೊಂದು ಕಪ್ಪಾ ರೂಪಾಂತರಿ ಎನ್ನಲಾಗಿತ್ತು. ಇದೀಗ ದೇಶದಲ್ಲಿ ಮತ್ತೊಂದು ಕೋವಿಡ್ ತರಂಗ ಹರಡಲಿದೆ ಎನ್ನುವ ಭಯ ನಮ್ಮ ಮುಂದಿಲ್ಲ ಎಂದು ವೈರಾಲಜಿಸ್ಟ್‌ಗಳು ತಿಳಿಸಿದ್ದಾರೆ. ಆದರೆ, ಅವರು ಎಚ್ಚರಿಕೆಯನ್ನು ವಹಿಸಲು ಮತ್ತು ಕೊರೊನಾ ಸೂಕ್ತ ನಡವಳಿಕೆಯನ್ನು ಅನುಸರಿಸಲು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ XE: ದೇಶದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆ!