ಮಾನವರಂತೆ ಸ್ವಾಭಿಮಾನದಿಂದ ಬದುಕುವ ಹಕ್ಕು ಏಕೆ ಕೆಲವರಿಗೆ ಮಾತ್ರ ಇದೆ? ಉಳಿದ ಮನುಷ್ಯರ ಮಲ ಕೊಳಕು ಶುಚಿಗೊಳಿಸುತ್ತ ದೇಶದ ಲಕ್ಷಾಂತರ ಜನ ಏಕೆ ಇನ್ನೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ ? ನಾವು ಯಾಕೆ ಈ ರೀತಿ ಇದ್ದೇವೆ ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಾಗ, ಕಾನೂನುಗಳನ್ನು ಮತ್ತು ಸರ್ಕಾರವನ್ನು ದೂಷಿಸುವುದು ಸಾಮಾನ್ಯ.
ಯಾವುದೇ ವಿಶ್ಲೇಷಣೆ ಬಾಹ್ಯ ಪರಿಸ್ಥಿತಿಗಳನ್ನು ಮೇಲ್ನೋಟಕ್ಕೆ ಮಾತ್ರ ಮುಟ್ಟಬಹುದು. ಆದರೆ, ಸಮಸ್ಯೆ ಮೂಲ ಜೀವಂತವಾಗಿ ಉಳಿಯುತ್ತದೆ. ಸಮಾಜದ ಕೆಲವು ಸ್ತರಗಳ ವಿರುದ್ಧ ಶತಮಾನಗಳಷ್ಟು ಹಳೆಯದಾದ ತಾರತಮ್ಯದಿಂದಾಗಿ ಶಿಕ್ಷಣ ಮತ್ತು ಆರ್ಥಿಕ ಸಮಾನತೆಯಿಂದ ಅವು ವಂಚಿತವಾಗುತ್ತಿವೆ. ಇದಕ್ಕೆ ಸ್ಪಷ್ಟವಾದ ಮತ್ತು ಲಜ್ಜೆಗೇಡಿ ಉದಾಹರಣೆ ಎಂದರೆ ಮಲ ಹೊರುವ ಪದ್ಧತಿ. ಮಾನವ ಮಲ ತೆಗೆದುಹಾಕಲು ಉಳಿದ ಮನುಷ್ಯರನ್ನು ಬಳಸುವ ಪದ್ಧತಿ ಈ ದೇಶದಲ್ಲಿ ಇನ್ನೂ ಜೀವಂತವಾಗಿ ಇದೆ. ಇದು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಸಮರ್ಥವಾದ ಮತ್ತು ಅನೇಕ ವರ್ಷಗಳಿಂದ ರೂಢಿಯಲ್ಲಿರುವ ಅನೈತಿಕ ಆಚರಣೆಗೆ ಕುರುಡಾಗಿರುವ ಸರ್ಕಾರಗಳ ಪರಿಣಾಮ ರಹಿತತೆ ಎತ್ತಿ ತೋರಿಸುತ್ತದೆ.
ಮಾನವ ಹಕ್ಕುಗಳ ಉಲ್ಲಂಘನೆ
ಸಂವಿಧಾನ ವ್ಯಕ್ತಿಗಳ ಘನತೆಯನ್ನು ಖಾತರಿಪಡಿಸುತ್ತದೆ. ಸಾರ್ವಜನಿಕ ಆರೋಗ್ಯ ಕಾಪಾಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಘೋಷಿಸಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ 1993ರಲ್ಲಿ ಮಲಹೊರುವ ವೃತ್ತಿ ಮತ್ತು ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯಿದೆ ಜಾರಿಗೆ ತಂದಿತ್ತು. ರಾಜ್ಯಗಳ ಸಂಪೂರ್ಣ ಹಠಮಾರಿ ಧೋರಣೆಯಿಂದಾಗಿ ಯಾವುದೇ ಹಂತದಲ್ಲಿ ಕಾನೂನನ್ನು ಸರಿಯಾಗಿ ಜಾರಿಗೊಳಿಸಲು ಆಗಲಿಲ್ಲ. ಇಪ್ಪತ್ತು ವರ್ಷಗಳ ನಂತರ 2013ರಲ್ಲಿ ಮಲಹೊರುವವರ ವೃತ್ತಿ ನಿಷೇಧ ಮತ್ತು ಅವರ ಪುನರ್ವಸತಿ ಖಾತ್ರಿಪಡಿಸುವ ಮತ್ತೊಂದು ಕಾನೂನನ್ನು ಜಾರಿಗೆ ತರಲಾಯಿತು. ಮಾನವ ತ್ಯಾಜ್ಯ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿದ್ದಕ್ಕಾಗಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳ ದಂಡ ತೆರಬೇಕು ಎನ್ನುತ್ತದೆ ಕಾನೂನು.
ವಿಚಿತ್ರ ಎಂದರೆ ದೇಶದಲ್ಲಿ ಲಕ್ಷಾಂತರ ಜನ ಆ 'ವೃತ್ತಿಯಲ್ಲಿ' ಇನ್ನೂ ಮುಂದುವರೆದಿದ್ದಾರೆ. 2013ರಲ್ಲಿಯೇ ಕಾನೂನು ಜಾರಿಗೆ ಬಂದ ಕಳೆದ ಏಳು ವರ್ಷಗಳಲ್ಲಿ ಯಾರಿಗಾದರೂ ಶಿಕ್ಷೆ ಅಥವಾ ದಂಡ ವಿಧಿಸಿರುವ ದಾಖಲೆಗಳು ಕಂಡುಬರುವುದಿಲ್ಲ. ದೇಶದ ಎಲ್ಲೆಡೆ ಇನ್ನೂ 7.7 ಲಕ್ಷ ಮಂದಿ ಮಲ ಹೊರುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಾನವ ತಾಜ್ಯವನ್ನು ತಮ್ಮ ಕೈಗಳಿಂದ ಎತ್ತಿ ಬುಟ್ಟಿಗಳಲ್ಲಿ ಕೊಂಡೊಯ್ಯುವ ಕ್ರೂರ ಕಾರ್ಯದಲ್ಲಿ ಸಾವಿರಾರು ಮಂದಿ ನಿರತರಾಗಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಈಗಲೂ ಸಾವಿರಾರು ಮಂದಿ ಮಲ ಹೊರುವ ವೃತ್ತಿಯಲ್ಲಿ ತೊಡಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅಧಿಕೃತ ಅಂಕಿ - ಅಂಶಗಳು ಏನೇ ಹೇಳಿದರೂ ಕೆಲವು ಅಧ್ಯಯನಗಳ ಪ್ರಕಾರ ಚರಂಡಿ, ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಇಳಿದಾಗ ವಿಷಕಾರಿ ಅನಿಲ ಸೇವಿಸಿ ಪ್ರತಿವರ್ಷ ಸರಾಸರಿ 1,700 ಜನರು ಅನಾರೋಗ್ಯದಿಂದ ಮರಣ ಹೊಂದುತ್ತಾರೆ.
ಈ ಹಿಂದೆ ಜಾರಿಗೆ ತಂದ ಎರಡು ಕಾನೂನುಗಳು ಅಪೇಕ್ಷಿತ ಫಲಿತಾಂಶ ನೀಡದ ಕಾರಣ, ಇತ್ತೀಚಿಗೆ ನಡೆದ ಸಂಸತ್ ಅಧಿವೇಶನದಲ್ಲಿ ಮಲಹೊರುವವರ ನೇಮಕಾತಿ ನಿಷೇಧಿಸಿ ತಿದ್ದುಪಡಿ ಮಾಡಲಾಗಿದೆ. ಹಿಂದಿನ ಕಾಯಿದೆಗಳಿಗೆ ಹೋಲಿಸಿದರೆ ಶಿಕ್ಷೆಯ ಪ್ರಮಾಣ ಕೂಡ ಹೆಚ್ಚಿದೆ . ಈ ಬಗೆಯ ವೃತ್ತಿಯನ್ನು ಅಸ್ಪೃಶ್ಯರಿಗೆ ಮೀಸಲಿಡುವ ಪಾಳೆಗಾರಿಕೆಯ ಮನೋಭಾವ ನಿಲ್ಲುವವರೆಗೆ ಇಂತಹ ಕಾನೂನುಗಳು ಕೇವಲ ಕಣ್ಣೊರೆಸುವ ತಂತ್ರಗಳಾಗಿ ಉಳಿಯುತ್ತವೆ. ಸಫಾಯಿ ಕರ್ಮಚಾರಿಗಳ ಜೀವಿತಾವಧಿ ಐವತ್ತು ವರ್ಷಕ್ಕಿಂತಲೂ ಹೆಚ್ಚಿಗೆ ಇರುವುದಿಲ್ಲ . ಮಲದ ಗುಂಡಿಗಳಿಗೆ ಇಳಿದು ಸ್ವಚ್ಛಗೊಳಿಸುವವರು ಹೆಚ್ಚಾಗಿ ಆಸ್ತಮಾ ಮತ್ತು ಹೆಪಟೈಟಿಸ್ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು ಶೋಚನೀಯ ಜೀವನ ನಡೆಸುತ್ತಾರೆ , ಇದರರ್ಥ ಭಾರತೀಯ ಪ್ರಜಾಪ್ರಭುತ್ವ ಉತ್ತಮ ಆಡಳಿತದತ್ತ ಸಾಗುತ್ತಿಲ್ಲ ಎಂಬುದೇ ಆಗಿದೆ.
ಸಾಮೂಹಿಕ ಜಾಗೃತಿ ಮೂಲಕ ಪರಿಹಾರ
ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಪ್ರಗತಿ ಹೊಂದುತ್ತಿದೆ ಎಂದು ಹೇಳಲಾಗುವ ಸಮಾಜದಲ್ಲಿ ಇನ್ನೂ ಒಣ ಶೌಚಾಲಯಗಳು ಅಸ್ತಿತ್ವದಲ್ಲಿ ಇವೆ ಎಂದಾದರೆ ಅಲ್ಲಿ ಮಾನವ ಕಾಳಜಿ ಇಲ್ಲ ಎಂದು ಅರ್ಥ. ದೇಶದ ಎಲ್ಲೆಡೆ ಇನ್ನೂ ಲಕ್ಷಾಂತರ ‘ಒಣ ಶೌಚಾಲಯಗಳು’ ಇವೆ ಎಂದಾದರೆ, ಅವುಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನ ಕೈಗಳು ಬೇಕಾಗುತ್ತವೆ. ಅದಕ್ಕಾಗಿಯೇ ಸಫಾಯಿ ಕರ್ಮಚಾರಿ ಆಂದೋಲನ (ಎಸ್‌ಕೆಎ) ಒಣ ಶೌಚಾಲಯಗಳನ್ನು ಕೆಡವಲು ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಗರಿಕ ಸಮಾಜ ಇನ್ನೂ ಈ ಶೌಚಾಲಯಗಳನ್ನು ಬಳಕೆ ಮಾಡುತ್ತಿದೆ ಮತ್ತು ಕೆಲವು ಜನರನ್ನು ತಲೆಮಾರುಗಳಿಂದ ಮಲ ಹೊರುವವರನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದು ಅಮಾನವೀಯ. ಅಮಾನವೀಯ ವರ್ತನೆ ಕೆಲವು ಜನರನ್ನು ಅನಿಯಮಿತ ದಬ್ಬಾಳಿಕೆ ಮತ್ತು ಅಸ್ಪೃಶ್ಯತೆಗೆ ತಳ್ಳುತ್ತದೆ ಮತ್ತು ಉಳಿದ ಕೆಲವರನ್ನು 'ಗೌರವಾನ್ವಿತ' ಎಂದು ಎತ್ತರಿಸಿ ನಿಲ್ಲಿಸುತ್ತದೆ. ಅಂತಹ ಸಂಕುಚಿತ ಮನೋಭಾವವನ್ನು ತಡೆಯುವುದು ಮತ್ತು ಸಮಾಜದೆಲ್ಲೆಡೆ ಜಾಗೃತಿ ಮೂಡಿಸುವುದು ಕಾನೂನು ಜಾರಿಗಿಂತಲೂ ಮುಖ್ಯವಾಗಿದೆ. ಆ ಮಟ್ಟಿಗೆ ಸ್ಥಳೀಯ ಸಂಸ್ಥೆಗಳನ್ನು ಅಣಿ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಒಂದು ಚಳವಳಿಯಾಗಿ ರೂಪುಗೊಳ್ಳಬೇಕು. ಇದಲ್ಲದೇ, ಒಳಚರಂಡಿ ವ್ಯವಸ್ಥೆಗಳ ಆಧುನೀಕರಣ, ಮಾನವ ತ್ಯಾಜ್ಯದ ಸಂಸ್ಕರಣೆ ಮತ್ತು ಸಾಗಣೆಗೆ ಯಂತ್ರೋಪಕರಣಗಳ ಬಳಕೆ ಬಗ್ಗೆ ಸರ್ಕಾರಗಳು ಹೆಚ್ಚು ಗಮನ ಹರಿಸಬೇಕು. ಸ್ವಚ್ಛತೆ ಮತ್ತು ಉತ್ತಮ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸದೆ ಹೋದಲ್ಲಿ ಮತ್ತು ಪ್ರಬಲ ಕ್ರಿಯಾ ಯೋಜನೆಯೊಂದಿಗೆ ಮುಂದಡಿ ಇಡದಿದ್ದಲ್ಲಿ, ಮಲ ಹೊರುವವರು ಮತ್ತು ಸಫಾಯಿ ಕರ್ಮಚಾರಿಗಳ ಬಗ್ಗೆ ನಕಲಿ ಸಹಾನುಭೂತಿ ತೋರಿದಂತಾಗುತ್ತದೆ ಮತ್ತು ಅವರನ್ನು ದುರುಪಯೋಗಕ್ಕೆ ಒಳಗಾಗಬೇಡಿ ಎಂದು ಹೇಳುವುದು ಅರ್ಥಹೀನ ಆಗುತ್ತದೆ.