ನವದೆಹಲಿ: ಭಾರತದಲ್ಲಿ 2024ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ ಓರ್ವ ವೈದ್ಯ ಎಂಬ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಯನ್ನು ಸಾಧಿಸುವ ಹಾದಿಯಲ್ಲಿದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಸಂಖ್ಯೆಯನ್ನು 11 ಲಕ್ಷದಿಂದ 22 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಕುಮಾರ್ ಪಾಲ್ ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಪೂರ್ಣಳ್ಳುತ್ತಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯುನಿಕೇಶನ್ ಮತ್ತು ವಿಜ್ಞಾನ ಪ್ರಸಾರ್ ಆಯೋಜಿಸಿದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ನ್ಯೂ ಇಂಡಿಯಾ @75 ಆನ್ಲೈನ್ ಭಾಷಣದಲ್ಲಿ ಅವರು ಮಾತನಾಡಿದರು.
ಕಳೆದ 75 ವರ್ಷಗಳಲ್ಲಿ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾತಂತ್ರ್ಯ ದೊರಕಿದ ಸಮಯದಲ್ಲಿ ಭಾರತದಲ್ಲಿ ವ್ಯಕ್ತಿಯೋರ್ವನ ಸರಾಸರಿ ಜೀವಿತಾವಧಿ ಕೇವಲ 28 ವರ್ಷಗಳಿತ್ತು. ಈಗ ಸರಾಸರಿ ಜೀವಿತಾವಧಿ 70 ವರ್ಷಗಳನ್ನು ತಲುಪಿದೆ ಎಂದು ವಿನೋದ್ ಪಾಲ್ ಹೇಳುತ್ತಾರೆ.
ಆದರೂ ದೇಶದಲ್ಲಿ ಆರೋಗ್ಯ ಸೇವೆಗಳ ವಿಚಾರದಲ್ಲಿ ನಾವು ಇನ್ನೂ ದೂರದಲ್ಲಿದ್ದೇವೆ. ಇದೊಂದು ಸವಾಲಾಗಿ ಉಳಿದಿದೆ. ಕಳೆದ ಆರು, ಏಳು ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಫಲಿತಾಂಶಗಳು ಉತ್ತಮವಾಗಿವೆ ಎಂದಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆ ಮತ್ತು ಜನ್ ಆರೋಗ್ಯ ಯೋಜನೆಯು ಜನರಿಗೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮಗಳಾಗಿದ್ದು, ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಹೆಜ್ಜೆ ಹಾಕಲಾಗುತ್ತಿದೆ ಎಂದು ವಿನೋದ್ ಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಶುತೋಷ್ ಶರ್ಮ ಕಳೆದ 50 ವರ್ಷಗಳಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಇಲಾಖೆಯ ಕೊಡುಗೆಯನ್ನು ಮತ್ತು ಭಾರತದಲ್ಲಿ ನಡೆದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಹೊಸ ಪ್ರಯತ್ನಗಳನ್ನು ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಯುವ ಪ್ರತಿಭೆಗಳಿಗೆ ಸಹಾಯ ಮಾಡಲು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಪ್ರಯತ್ನಿಸುತ್ತಿದ್ದು, ಇದು ಭವಿಷ್ಯದ ಪ್ರತಿಭೆಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ನಾವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇವುಗಳು ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಶುತೋಷ್ ಶರ್ಮ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಿಮ್ಮ ಹೆಸರು 'ನೀರಜ್' ಆಗಿದ್ರೆ ಈ ಬಂಕ್‌ನಲ್ಲಿ 501 ರೂಪಾಯಿಯ ಪೆಟ್ರೋಲ್ ಉಚಿತ!