ಕೋಯಿಕ್ಕೋಡ್ (ಕೇರಳ): ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಚಾತಮಂಗಲಂನ ಪಾಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬಂದ ಬಾವಲಿಗಳ ದೇಹದ ದ್ರವಗಳನ್ನು ಸಂಗ್ರಹಿಸಿದ್ದಾರೆ.
ಈಗಾಗಲೇ ಈ ಪ್ರದೇಶದಲ್ಲಿ 12 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೂಲ ಏನೆಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಬಾಲಕನ ಮನೆಯಲ್ಲಿದ್ದ ಮೇಕೆಯ ರಕ್ತ ಮತ್ತು ಜೊಲ್ಲನ್ನು ಸಂಗ್ರಹಿಸಿ ಭೋಪಾಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಕೆ.ಕೆ ಬೇಬಿ ನೇತೃತ್ವದ ತಂಡವು ಸೋಂಕಿನ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದೆ. ಮಾರಣಾಂತಿಕ ನಿಫಾ ವೈರಸ್ ಇದೆಯೇ ಎಂದು ಪರೀಕ್ಷಿಸಲು ಬಾವಲಿ ಮತ್ತು ಮೇಕೆಗಳ ಮಾದರಿಗಳನ್ನು ಭೋಪಾಲ್‌ಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಹಂದಿಗಳು ನಿಫಾ ಸೋಂಕಿನ ದ್ವಿತೀಯ ಮೂಲವಾಗಿದೆ. ಏಕೆಂದರೆ ಅವುಗಳು ಸಾಮಾನ್ಯವಾಗಿ ಬಾವಲಿಗಳು ತಿನ್ನುವ ಕಾಡು ಹಣ್ಣುಗಳನ್ನು ತಿನ್ನುತ್ತವೆ. ಆದ್ದರಿಂದ ಈ ಪ್ರದೇಶದಲ್ಲಿ ಕಾಡುಹಂದಿಗಳು ಇರುವುದನ್ನು ಪರೀಕ್ಷಿಸಲು ಪಶುಸಂಗೋಪನಾ ಇಲಾಖೆಯು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸುತ್ತಿದೆ.
ತಂಡವು ಆ ಪ್ರದೇಶದಿಂದ ರಂಬುಟಾನ್ ಹಣ್ಣುಗಳ ಮಾದರಿಗಳನ್ನು ಸಂಗ್ರಹಿಸಿದೆ. ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಆತ ರಂಬುಟಾನ್ ಹಣ್ಣನ್ನು ತಿಂದಿದ್ದಾನೆ ಎಂದು ಮೃತ ಬಾಲಕನ ಕುಟುಂಬವು ಅಧಿಕಾರಿಗಳಿಗೆ ತಿಳಿಸಿತ್ತು.
ಈ ಹಿಂದೆಯೇ ಪತ್ತೆ ಆಗಿತ್ತು!
ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ರೋಗ (ಎನ್ಐವಿ) ಮೇ 19, 2018 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿತ್ತು. 2018ರ ಜೂನ್ 1 ರವರೆಗೆ ರಾಜ್ಯದಲ್ಲಿ 17 ಸಾವುಗಳಿಗೆ ಮತ್ತು 18 ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದವು. ಕೇರಳ ಅತೀ ಸಾಹಸಿಕವಾಗಿ ನಿಫಾವನ್ನು ಮೆಟ್ಟಿ ನಿಂತಿತ್ತು.
ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್
ನಿಫಾ ವೈರಸ್ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದೆ. ಹಾರುವ ಬಾವಲಿಯಿಂದ, ನರಿಗಳಿಂದ ಹರಡುತ್ತವೆ. ಜತೆಗೆ ಹಂದಿಗಳಿಂದಲೂ ಸಹ ಈ ವೈರಸ್ ಹರಡುತ್ತವೆ. ಇದೊಂದು ಮಾರಣಾಂತಿಕ ವೈರಸ್. ಜತೆಗೆ ಮಿದುಳಿಗೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ.
12 ವರ್ಷದ ಬಾಲಕ ನಿಫಾ ವೈರಸ್ಗೆ ಬಲಿಯಾಗಿದ್ದ, ಈ ಹಿನ್ನೆಲೆಯಲ್ಲಿ ನಿಫಾ ಬಗ್ಗೆ ದೇಶಾದ್ಯಂತ ಭೀತಿ ಶುರುವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವೂ ತೀವ್ರ ನಿಗಾ ಇಟ್ಟಿದೆ.