ತಿರುವನಂತಪುರಂ(ಕೇರಳ) : ಕೊರೊನಾ ಅಟ್ಟಹಾಸಕ್ಕೆ ಕೇರಳ ರಾಜ್ಯದ ಜನತೆ ನಲುಗಿದ್ದಾರೆ. ರಾಜ್ಯದಲ್ಲಿ ಇಂದು 25,772 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. 27,320 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದೇ ವೇಳೆಯಲ್ಲಿ ಕೊರೊನಾಗೆ 189 ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ ಇಂದು ನಡೆದ ಕೋವಿಡ್-19 ಸ್ಥಿತಿಗತಿ ತಿಳಿದುಕೊಳ್ಳಲು ಕೇರಳ ಸಿಎಂ ಪಿಣರಾಯಿ ವಿಜಯನ್ ಪರಿಶೀಲನಾ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಕೇರಳದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 4ರಿಂದ ಪುನಾರಂಭಗೊಳ್ಳಲಿವೆ ಎಂದರು.
ತಾಂತ್ರಿಕ, ಪಾಲಿಟೆಕ್ನಿಕ್, ವೈದ್ಯಕೀಯ, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಅಂತಿಮ ವರ್ಷದ ತರಗತಿಗಳು ಅಕ್ಟೋಬರ್ 4ರಿಂದ ಪುನಾರಂಭಗೊಳ್ಳಲಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಬಯಸಿದರೆ ಕನಿಷ್ಟ ಒಂದು ಡೋಸ್ ಲಸಿಕೆ ತೆಗೆದುಕೊಂಡಿರಬೇಕು ಎಂದರು.
ಓದಿ: ಕೇರಳದಲ್ಲಿ ನಿಫಾ ವೈರಸ್ ಪತ್ತೆ : ಕರ್ನಾಟಕದಲ್ಲಿ ಕಟ್ಟೆಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
ಮೇಲಿನ ಎಲ್ಲಾ ವರ್ಗದವರು ಈ ವಾರದ ಅಂತ್ಯದೊಳಗೆ ಕೊರೊನಾ ಲಸಿಕೆ ಪಡೆಯಬೇಕು. ಎಲ್ಲಾ ಶಾಲಾ ಶಿಕ್ಷಕರು ಕೂಡ ಈ ವಾರವೇ ವ್ಯಾಕ್ಸಿನೇಷನ್ಗೆ ಒಳಪಡಬೇಕು. ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಲಿದೆ ಎಂದರು. ಇಂದು ನಡೆದ ಕೋವಿಡ್-19 ಪರಿಶೀಲನಾ ಸಭೆಯಲ್ಲಿ ರಾತ್ರಿ ಕರ್ಫ್ಯೂ ಹಿಂತೆಗೆದುಕೊಳ್ಳಲು ಮತ್ತು ಭಾನುವಾರ ಲಾಕ್‌ಡೌನ್ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು.
ಕೊರೊನಾ ಜತೆ ಕೇರಳಕ್ಕೆ ನಿಫಾ ಕಂಟಕ : NIV, ಪುಣೆಗೆ ಕಳುಹಿಸಿದ ಎಲ್ಲಾ ಮಾದರಿಗಳ ಫಲಿತಾಂಶಗಳು ಋಣಾತ್ಮಕವಾಗಿವೆ. ಹೆಚ್ಚಿನ ಮಾದರಿಗಳನ್ನು ಕಳುಹಿಸಲಾಗಿದೆ ಮತ್ತು ಅವುಗಳ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ನಿಫಾ ನಿರ್ವಹಣಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಚಿಕಿತ್ಸೆ ಮತ್ತು ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ನಿಫಾ ವೈರಸ್ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದರು.