ಭಾಗಲ್ಪುರ್ (ಬಿಹಾರ): ರಾತ್ರಿ ನಡೆಯುವ ಕಳ್ಳತನಗಳು, ಅಪರಾಧಗಳನ್ನು ತಡೆಯಲೆಂದು ಗಸ್ತು ತಿರುಗುವುದು ಪೊಲೀಸರ ಕರ್ತವ್ಯ. ಆದರೆ, ಅದೇ ಗಸ್ತಿನಲ್ಲಿದ್ದ ಪೊಲೀಸರೇ ಮನೆಯೊಂದರ ಹೊರಗೆ ಇಟ್ಟಿದ್ದ ಟೇಬಲ್ ಫ್ಯಾನ್ ಕದ್ದೊಯ್ದಿರುವ ಘಟನೆ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಸೆ.26ರಂದು ರಾತ್ರಿ ಧೋಲ್‌ಬಾಜಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಮ್ಮ ಕಾರನ್ನು ನಿಲ್ಲಿಸಿ ಟೇಬಲ್ ಫ್ಯಾನ್ ಹೊತ್ತೊಯ್ದಿದ್ದಾರೆ. ಇತ್ತ, ಫ್ಯಾನ್ ಕಾಣೆಯಾಗಿರುವುದನ್ನು ಕಂಡ ಮನೆಯ ಮಾಲೀಕ ಸುಬೋಧ್ ಚೌಧರಿ, ನೆರೆಹೊರೆಯವರನ್ನು ವಿಚಾರಿಸಿ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಆಗ ಪೊಲೀಸರ ಈ ಕೃತ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಇದರಿಂದ ಸುಬೋಧ್ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಪೊಲೀಸರು ಠಾಣೆಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಆದರೆ, ಸುಬೋಧ್ ಪೊಲೀಸರಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದಾಗ ಅದನ್ನು ನೋಡಿದ ಪೊಲೀಸರೇ ಆಶ್ಚರ್ಯಚಕಿತರಾಗಿ ಫ್ಯಾನ್ನ್ನು ಹಿಂತಿರುಗಿಸಿದ್ದಾರೆ.
ಸದ್ಯ ಪೊಲೀಸರು ಟೇಬಲ್ ಫ್ಯಾನ್ ಕದ್ದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ, ಇಡೀ ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಮಗನ ಜನ್ಮದಿನ ಆಚರಿಸುತ್ತಿದ್ದ ಪತ್ನಿ ಮೇಲೆ ಹಲ್ಲೆಗೈದ ಟೆಕ್ಕಿ.. ಮಗುವಿನಿಂದಲೂ ತಾಯಿ ಮೇಲೆ ದಾಳಿ!