ಪುಣೆ: ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೋವಿಡ್ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು, ಈಗಾಗಲೇ ನಾಗ್ಪುರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಪುಣೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಇದೀಗ ಅಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮಾರ್ಚ್ 31ರವರೆಗೆ ಶಾಲಾ-ಕಾಲೇಜುಗಳು ಬಂದ್ ಇರಲಿವೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರಮುಖವಾಗಿ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.
ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ರಾತ್ರಿ 10 ಗಂಟೆಗೆ ಬಂದ್ ಆಗಲಿದ್ದು, ಸದ್ಯ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್-ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ 11ರವರೆಗೆ ಸರಕುಗಳ ಹೋಂ ಡೆಲಿವರಿ ಇರಲಿದ್ದು, ಮಾಲ್, ಮಾರುಕಟ್ಟೆ, ಸಿನಿಮಾ ಹಾಲ್ ರಾತ್ರಿ 10 ಗಂಟೆಯೊಳಗೆ ಬಂದ್ ಆಗಿರಲಿವೆ. ಪ್ರಮುಖವಾಗಿ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರು ಸೇರಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮನೋಜ್ ಬಾಜಪೇಯಿಗೆ ಕೊರೊನಾ ಸೋಂಕು; ಹೋಂ ಕ್ವಾರಂಟೈನಲ್ಲಿದ್ದಾರೆ ನಟ
ಅಕೋಲಾದಲ್ಲಿ ಲಾಕ್ಡೌನ್: ನಾಗ್ಪುರದಲ್ಲಿ ಈಗಾಗಲೇ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಇದರ ಬೆನ್ನಲ್ಲೇ ಇಂದು ರಾತ್ರಿಯಿಂದಲೇ ಅಕೋಲಾದಲ್ಲೂ ಲಾಕ್ಡೌನ್ ಜಾರಿಗೊಳ್ಳಲಿದೆ. ಮಾರ್ಚ್ 15ರವರೆಗೆ ಇದು ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳು ಸಿಗಲಿವೆ ಎಂದು ತಿಳಿಸಲಾಗಿದೆ.
ಮೊಹಾಲಿಯಲ್ಲಿ ನೈಟ್ ಕರ್ಫ್ಯೂ: ಪಂಜಾಬ್ನಲ್ಲೂ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಇದೀಗ ಮೊಹಾಲಿ ಹಾಗೂ ಫತೇಘರ್ ಸಾಹಿಬ್ನಲ್ಲಿ ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.